ಮುಡಗೇರಿ ಭೂಮಿ ಸ್ವಾಧೀನ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ರೂ. ಪರಿಹಾರ ದೊರಕಿಸಿಕೊಟ್ಟ ಶಾಸಕಿ ರೂಪಾಲಿ ನಾಯ್ಕ

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ನಿರಂತರ ಪ್ರಯತ್ನದಿಂದ ತಾಲ್ಲೂಕಿನ ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಸ್ವಾಧೀನಕ್ಕೆ ಒಳಗಾದ ಸಂತ್ರಸ್ತರಿಗೆ ಎಕರೆಗೆ ತಲಾ 40 ಲಕ್ಷ ರೂ. ಗಳಂತೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪರಿಹಾರ ನಿಗದಿ ಪಡಿಸಿದೆ. ಈ ಮೂಲಕ ಹೆಚ್ಚುವರಿ ಪರಿಹಾರ ದೊರಕಿಸಿಕೊಡುವುದಾಗಿ ರೂಪಾಲಿ ಎಸ್.ನಾಯ್ಕ ನುಡಿದಂತೆ ನಡೆದು ಭೂಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಮುಡಗೇರಿ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದ 73 ಎಕರೆಯಷ್ಟು ಪ್ರದೇಶದ ಭೂಮಿ ಕಳೆದುಕೊಂಡವರು ಹೆಚ್ಚಿನ ಪರಿಹಾರ ನೀಡಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡ ಶಾಸಕಿ ರೂಪಾಲಿ ಎಸ್.ನಾಯ್ಕ ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಅವರನ್ನು ಭೇಟಿ ಮಾಡಿ ಮುಡಗೇರಿ ಸಂತ್ರಸ್ತರ ಪರವಾಗಿ ಮನವಿಯನ್ನು ಮಾಡಿ, ಹೆಚ್ಚುವರಿ ಪರಿಹಾರ ನೀಡುವಂತೆ ವಿನಂತಿಸಿದ್ದರು.

ಭೂಮಿ ಕಳೆದುಕೊಂಡವರಿಗೆ ನಿರಾಸೆಯಾಗದಂತೆ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಸಚಿವರೂ ಕೂಡ ಈ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದರು. ಆರಂಭದಲ್ಲಿ ಎಕರೆಗೆ 10 ಲಕ್ಷ ರೂ. ಇದ್ದ ಪರಿಹಾರ ಶಾಸಕರ ಪ್ರಯತ್ನದಿಂದ 40 ಲಕ್ಷ ರೂ.ಗಳಿಗೇರಿದೆ.

ಮುಡಗೇರಿಯಲ್ಲಿ ಸಂತ್ರಸ್ಥರ ಸಭೆ ನಡೆಸಿ ಅವರಿಗೆ ಹೆಚ್ಚುವರಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವರನ್ನೂ ಭೇಟಿಯಾಗಿ ಮನವಿ ಮಾಡಿದ್ದೆ. ಈಗ ಎಕರೆಗೆ 40 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಮುಡಗೇರಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವುದು ನನ್ನ ಉದ್ದೇಶವಾಗಿತ್ತು. ಕೊಟ್ಟ ಭರವಸೆಯಂತೆ ನಡೆದ ಸಮಾಧಾನ ನನಗಿದೆ.

– ರೂಪಾಲಿ ಎಸ್.ನಾಯ್ಕ, ಶಾಸಕರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ