ನವದೆಹಲಿ: 6 ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಜನವರಿ 1 ರಿಂದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನಿಂದ ಬರುವ ಪ್ರಯಾಣಿಕರಿಗೆ ಈ ಆದೇಶ ನಿನ್ನೆಯಿಂದಲೇ ಜಾರಿಯಾಗಿದೆ. ಪ್ರಯಾಣಿಕರು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ತಮ್ಮ ಕೊವಿಡ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಅನ್ನು ಅಪ್‌ಲೋಡ್ ಮಾಡಬೇಕು. ಭಾರತಕ್ಕೆ ಪ್ರಯಾಣ ಬೆಳೆಸುವ 72 ಗಂಟೆಗಳಿಗೂ ಮುನ್ನ ಕೊವಿಡ್ ಪರೀಕ್ಷೆ ನಡೆಸಬೇಕು.
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.