ದೆಹಲಿ: ದೆಹಲಿಯ ದ್ವಾರಾಕಾದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು 17 ವರ್ಷದ ಶಾಲಾ ವಿದ್ಯಾರ್ಥಿನಿಗೆ ಆ್ಯಸಿಡ್ ಎರಚಿರುವ ಘಟನೆ ವರದಿಯಾಗಿದೆ. ಆ್ಯಸಿಡ್ ದಾಳಿಗೊಳಗಾಗಿರುವ ವಿದ್ಯಾರ್ಥಿನಿ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿರುವ ಆ್ಯಸಿಡ್ ದಾಳಿ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಬೆಳಗ್ಗೆ ಸರಿ ಸುಮಾರು 7.30 ಕ್ಕೆ ಬೈಕ್ನಲ್ಲಿ ಬಂದ ವ್ಯಕ್ತಿಗಳು 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ನಂತಿರುವ ವಸ್ತು ಎರಚಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದರು ಎಂದು ಉಪ ಪೊಲೀಸ್ ಆಯುಕ್ತ ಎಂ. ಹರ್ಷವರ್ಧನ್ ಹೇಳಿದ್ದಾರೆ.
ಘಟನೆ ನಡೆದಾಗ ಬಾಲಕಿ ಜತೆ ಆಕೆಯ ತಂಗಿ ಕೂಡಾ ಇದ್ದಳು. ತಮಗೆ ಪರಿಚಿತರಾಗಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದಾರೆ ಎಂದು ಆಕೆ ಸಂದೇಹ ವ್ಯಕ್ತ ಪಡಿಸಿದ್ದಾಳೆ. ಇದೀಗ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಈ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ. ಆರೋಪಿಗಳು ಅಪ್ರಾಪ್ತರೇ ಅಥವಾ ಅಲ್ಲವೇ ಎಂಬುದು ಈ ವರೆಗೆ ತಿಳಿದುಬಂದಿಲ್ಲ.
ದಾಳಿಗೆ ಕಾರಣ ಏನೆಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು, ಸಂತ್ರಸ್ತೆ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಲಾಗಿದೆ.