ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾದ ಮುರ್ಡೇಶ್ವರ ನಿವಾಸಿಗಳು.!

ಭಟ್ಕಳ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಇಲ್ಲಿನ ಪ್ರವಾಸಿ ತಾಣವಾದ ಮುರ್ಡೇಶ್ವರದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ಸಮಸ್ಯೆ ಎದುರಿಸುವಂತಾಗಿದೆ.

ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರಿಂದ ಅಡ್ಡಾದಿಡ್ಡಿ ವಾಹನಗಳ ನಿಲ್ಲುಗಡೆಯಿಂದ ಪಾದಚಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಿಯಂತ್ರಿತ ಹೆಚ್ಚುತ್ತಿರುವ ಜನರ ಸಂಖ್ಯೆ ಹಾಗೂ ವಾಹನಗಳ ಭರಾಟೆಯಿಂದ ಈ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದೆ.

ಇಲ್ಲಿಯ ಬಸ್ ನಿಲ್ದಾಣನಿಂದ ಕೆನರಾ ಬ್ಯಾಂಕ್ ವರೆಗೆ ವಾಹನ ನಿಲುಗಡೆ ವ್ಯವಸ್ಥೆ ಹದಗೆಡುತ್ತಿದ್ದು, ಪ್ರಮುಖ ರಸ್ತೆಗಳ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳಿಂದ ಸುಗಮ ಸಂಚಾರಕ್ಕೆ ಸಂಚಕಾರವಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಬೈಕ್ ಸವಾರರು ಹಾಗೂ ರಿಕ್ಷಾ ಓಡಿಸುವವ ವಾಹನಗಳಿವೆ. ಆದರೆ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ವಾಹನಗಳ ನಿಲುಗಡೆ ವ್ಯವಸ್ಥೆ ಇಲ್ಲದಂತಾಗಿದೆ.

ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ತಮ್ಮ ಕೆಲಸಗಳಿಗನುಗುಣವಾಗಿ ವಿಧಿ ಇಲ್ಲದೆ ತಮ್ಮಗಿಷ್ಟ ಬಂದ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ.

ಬಸ್ತಿ ಮಾರ್ಗವಾಗಿ ಭಟ್ಕಳ ಕಡೆ ತೆರಳುವ ಕಲ್ಯಾಣಿ ಪಕ್ಕದ ಹಾಗೂ ದಿನನಿತ್ಯ ಕಚೇರಿ ಕೆಲಸಕ್ಕೆ ಗ್ರಾಮ ಪಂಚಾಯತ ಹಾಗೂ ನಾಡ ಕಛೇರಿ, ಪೋಸ್ಟ್ ಆಫೀಸ್ ಸಂಪರ್ಕಿಸುವ ರಸ್ತೆಗಳು ಅತ್ಯಂತ ಜನಬಿಡವಾಗಿದ್ದು, ಇಂತಹ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇಲ್ಲವಾಗಿದೆ. ಇನ್ನಿತರ ರಸ್ತೆಗಳ ಪಕ್ಕದಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದರಿಂದ ದಿನಕ್ಕೆ ಹತ್ತಾರು ಬಾರಿ ಟ್ರಾಫಿಕ್ ಜಾಮ್ ಸಮಸ್ಯೆ ಸಾಮಾನ್ಯವಾಗಿದೆ.

ಪೊಲೀಸರು ಟ್ರಾಫಿಕ್ ಜಾಮ್ ಭೇದಿಸಲು ಮಾಡುವ ಕಷ್ಟ ಹೇಳತೀರದು. ಇದು ಬೆಳಗ್ಗೆ 11 ರಿಂದ 12 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ನೋಡಲು ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನ ಸಂಪರ್ಕಿಸುವ ರಸ್ತೆ ಅಗಲೀಕರಣ ಮಾಡಿದ್ದರೂ ಹೆಚ್ಚುತ್ತಿರುವ ದಟ್ಟಣೆಯಿಂದ ಪರಿಸ್ಥಿತಿ ಯಥಾಸ್ಥಿತಿಗೆ ಬಂದು ನಿಂತಿದೆ. ಪೊಲೀಸರಲ್ಲದೆ ಸ್ಥಳೀಯ ಎರಡು ಪಂಚಾಯತಗಳ ಅಧಿಕಾರಿಗಳೂ ಸಂಚಾರ ಸಮಸ್ಯೆ ಪರಿಹಾರಕ್ಕೆ ಪೊಲೀಸರೊಂದಿಗೆ ಕೈ ಜೋಡಿಸುವ ಅಗತ್ಯವಿದೆ.

ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ನಮ್ಮ ಸಹಕಾರವೂ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.