ದತ್ತಪೀಠ ಮಾರ್ಗದಲ್ಲಿ ಮೊಳೆಗಳನ್ನು ಚೆಲ್ಲಿದ ದುಷ್ಕರ್ಮಿಗಳು: ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಮೊಳೆ ತೆರವು ಕಾರ್ಯ.!

ಚಿಕ್ಕಮಗಳೂರು: ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಮಂಗಳವಾರದಿಂದ ದತ್ತ ಜಯಂತಿ ಕಾರ್ಯಕ್ರಮವು ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ಇದೇ ಸಂದರ್ಭದಲ್ಲಿ ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 1 ಕಿ.ಮೀ. ದೂರದವರೆಗೆ ಕೆಲವು ಕಿಡಿಗೇಡಿಗಳು ಮೊಳೆಯನ್ನು ಹಾಕಿ ದುಷ್ಕೃತ್ಯ ಎಸಗಲು ಮಂದಾಗಿರುವುದು ಕಂಡುಬಂದಿದೆ.

ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಕಾರಣದಿಂದ ಕೈಮಾರ ಚೆಕ್ ಪೋಸ್ಟ್‌ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಚಿಕ್ಕ ಚಿಕ್ಕ ಮೊಳೆಗಳನ್ನು ಚೆಲ್ಲಲಾಗಿದೆ. ದತ್ತಪೀಠ ದರ್ಶನಕ್ಕೆ ಅಡ್ಡಿಪಡಿಸುವುದರ ಜೊತೆಗೆ ಅಪಘಾತಗಳು ಸಂಭವಿಸಲಿ ಎಂಬ ಕಾರಣಕ್ಕೆ ಈ ರೀತಿಯ ಕೃತ್ಯವನ್ನು ದುಷ್ಕರ್ಮಿಗಳು ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಆ ಮೊಳೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಸಿ.ಟಿ. ರವಿ, ದತ್ತಜಯಂತಿ ಪ್ರಯುಕ್ತ ವಿದ್ವಂಸಕ ಕೃತ್ಯವನ್ನು ಎಸಗಲು ಕೆಲವರು ಸಂಚು ರೂಪಿಸಿದ್ದಾರೆ. ಬೆಟ್ಟದ ರಸ್ತೆ ತಿರುವಿನಲ್ಲಿ ಕೆಲವರು ಮೊಳೆಗಳನ್ನು ಹಾಕಿದ್ದು, ಈ ಮೂಲಕ ಅಪಘಾತಗಳು ಸಂಭವಿಸುವಂತೆ ಪ್ಲ್ಯಾನ್‌ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ಕಾರ್ಯಕರ್ತರು ಮೊಳೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಸೆರೆಹಿಡಿದು ತಕ್ಕ ಶಿಕ್ಷೆ ನೀಡುವಂತೆ ಆಗಬೇಕು ಎಂದು ಕೋರಿದ್ದಾರೆ.