ಶಾಲೆಗಳಲ್ಲಿ ಧ್ಯಾನಕ್ಕೆ ಹಲವರಿಂದ ವಿರೋಧ.? ಮುಸ್ಲಿಂ ಮುಖಂಡರು ಹಾಗೂ ಶಿಕ್ಷಣ ತಜ್ಞರ ಅಪಸ್ವರ.!

ಬೆಂಗಳೂರು: ಹಿಜಾಬ್ ಬಳಿಕ ಶಾಲೆಗಳಲ್ಲಿ ‘ಧ್ಯಾನ’ ದಂಗಲ್ ಶುರುವಾಗಿದೆ. ಶಿಕ್ಷಣ ಸಚಿವರ ‘ಧ್ಯಾನ’ದ ಸಲಹೆಗೆ ಹಲವರು ಅಪಸ್ವರವೆತ್ತಿದ್ದಾರೆ. ಶಾಲೆಗಳಲ್ಲಿ ಧ್ಯಾನಕ್ಕೆ ಸಮಯ ನೀಡಿದ್ದ ಶಿಕ್ಷಣ ಇಲಾಖೆ ವಿರುದ್ಧ ಮುಸ್ಲಿಂ ಮುಖಂಡರು ಹಾಗೂ ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ಆರೋಗ್ಯ ವೃದ್ಧಿಸಲು ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸಲಹೆ ನೀಡಿದ್ದರು. ಸದ್ವಿಚಾರ ಚಿಂತನೆ, ಒತ್ತಡಗಳಿಂದ ಮುಕ್ತವಾಗಿ ಜ್ಞಾನಾರ್ಜನೆ, ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ಉದ್ದೇಶದಿಂದ ಧ್ಯಾನ ಮಾಡಿಸಲು ಸಚಿವ ನಾಗೇಶ್ ನೀಡಿರುವ ಸುತ್ತೋಲೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಶಿಕ್ಷಣ ಸಚಿವರು ಶಿಕ್ಷಣದ ಹಕ್ಕು ಉಲ್ಲಂಘನೆ ಮಾಡಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದಾರೆ. ಮುಸ್ಲಿಂ ಮುಖಂಡರು ಇದನ್ನು ಕೇಸರಿಕರಣ ಹೇರಿಕೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಧ್ಯಾನದ ಮೂಲಕ ಓಂಕಾರ ಹೇಳಿಕೊಡುತ್ತಾರೆ. ಆಗ ನಾವು ಕುರಾನ್ ಪಠಣ ಮಾಡೋದಾ ಹೇಗೆ.? ಎಂದು ಮುಸ್ಲಿಂ ಮುಖಂಡರು ಪ್ರಶ್ನೆ ಎತ್ತಿದ್ದಾರೆ. ಅಲ್ಲದೇ ಧ್ಯಾನ ಅಂದ್ರೆ ಹೇಗೆ.? ಧ್ಯಾನವನ್ನ ಮಾಡುವ ವಿಧಾನ ಯಾವುದು.? ಇದಕ್ಕೆ ಯಾವುದಕ್ಕೂ ಸ್ಪಷ್ಟವಿಲ್ಲದೇ ಸುತ್ತೋಲೆ ಹೊರಡಿಸಿರುವುದಕ್ಕೆ ವಿರೋಧ ಹೊರ ಹಾಕಿದ್ದಾರೆ.