ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ವರ್ಗಾವಣೆ ಭಾಗ್ಯ.!

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಪದೇ ಪದೇ ವರ್ಗಾವಣೆ ಭಾಗ್ಯ ಸಿಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯ ಸರ್ಕಾರ 5 ವರ್ಷದ ಅಂತರದಲ್ಲಿ 9 ಜನ ನಿರ್ದೇಶಕರಿಗೆ ಎತ್ತಂಗಡಿ‌ ಭಾಗ್ಯ ನೀಡಿದೆ. 22 ದಿನದಲ್ಲೆ ಮತ್ತೆ ನಿರ್ದೇಶಕರನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಕಾಶ್‌ ನಿಟ್ಟಾಲಿ ಅವರ ವರ್ಗಾವಣೆ ಬಳಿಕ ಕೆ.ಎಂ. ಜಾನಕಿ ಕೇವಲ 22 ದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಮತ್ತೆ ಪ್ರಕಾಶ್‌ ನಿಟ್ಟಾಲಿ ಅವರನ್ನೇ ಅದೇ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಈ ರೀತಿ ಪದೇ ಪದೇ ವರ್ಗಾವಣೆ ಅಧಿಕಾರಿಗಳ‌ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ವರ್ಗಾವಣೆ ಸರ್ಜರಿಯಿಂದ ಇಲಾಖೆಯ ವಾರ್ಷಿಕ ಕಾರ್ಯಚಟುವಟಿಕೆಗೂ ಸಾಕಷ್ಟು ತೊಡಕುಂಟಾಗಿದೆ.

ಓರ್ವ ಅಧಿಕಾರಿ 2 ರಿಂದ 3 ವರ್ಷ ಅಧಿಕಾರದಲ್ಲಿದ್ದಾಗ ಇಲಾಖೆ ಚಟುವಟಿಕೆ ಸರಾಗವಾಗಿ ಸಾಗಲು ಸಾಧ್ಯ. ಇಲ್ಲವಾದಲ್ಲಿ ಇಲಾಖೆ ಚಟುವಟಿಕೆಗಳು ಕುಂಠಿತವಾಗುವ ಆತಂಕವಿದೆ ಎಂದು ಇಲಾಖೆಯ ಕೆಲ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಕಡಿಮೆ ಅವಧಿಯಲ್ಲಿ ಪದೇ ಪದೇ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದಾರೆ.