ಗುಜರಾತ್: ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಎಲೆಕ್ಷನ್ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುರುವಾರ ಪ್ರಕಟಿಸಿದ್ದಾರೆ.
ಗುಜರಾತ್‌ನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.ಗುಜರಾತ್ ನಲ್ಲಿ 2.53ಕೋಟಿ ಪುರುಷ ಮತದಾರರು ಇದ್ದಾರೆ.2.37 ಕೋಟಿ ಮಹಿಳಾ ಮತದಾರರು ಇದ್ದು 4.61ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.