ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಕೇಸಿಗೆ ಟ್ವಿಸ್ಟ್: ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ ಚಂದ್ರಶೇಖರ್ ಕಾರು ಪಾಸ್ ಆಗಿರುವ ದೃಶ್ಯ.!

ದಾವಣಗೆರೆ: ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ರೇಣುಕಾಚಾರ್ಯ ಸಹೋದರ ಎಂ.ಪಿ. ರಮೇಶ್ ಅವರ ಹಿರಿಯ ಪುತ್ರ ಎಂ.ಆರ್. ಚಂದ್ರಶೇಖರ್ ಸೋಮವಾರ ರಾತ್ರಿ ಹೊನ್ನಾಳಿಗೆ ಬಂದಿದ್ದು, ಆದರೆ ಮನೆ ತಲುಪಿಲ್ಲ ಎಂದು ಕುಟುಂಬಸ್ಠರು ಹೇಳಿದ್ದಾರೆ. ಹೊನ್ನಾಳಿಯ ಸುರಹೊನ್ನೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ವೊಂದರ ಸಿಸಿ ಕ್ಯಾಮರಾದಲ್ಲಿ ಚಂದ್ರಶೇಖರ್ ಕಾರು ಪಾಸ್ ಆಗಿರುವ ದೃಶ್ಯ ಸೆರೆಯಾಗಿದೆ.

ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ  ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್, ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಸೋಮವಾರ ರಾತ್ರಿ 11.47 ಸುಮಾರಿಗೆ ಸುರಹೊನ್ನೆ ರಸ್ತೆಯಿಂದ ಹೊನ್ನಾಳಿ ಕಡೆಗೆ ಚಂದ್ರಶೇಖರ್ ಕಾರು ಪಾಸ್ ಆಗಿದೆ. ಆದರೆ ಅವರು ಮನೆಗೆ ತಲುಪಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ರೇಣುಕಾಚಾರ್ಯ ಸೇರಿದಂತೆ ಕುಟುಂಬ ಸದಸ್ಯರು ತೀವ್ರ ಹುಡುಕಾಟ ನಡೆಸಿದ್ದು, ಎರಡು ದಿನ ಕಳೆದರೂ ಸುಳಿವು ಸಿಕ್ಕಿಲ್ಲ. ಸ್ನೇಹಿತರು, ಬಂಧುಗಳನ್ನು ವಿಚಾರಿಸಿದರೂ ಪತ್ತೆಯಾಗಿಲ್ಲ. ಇನ್ನು ಎಸ್‌ಪಿ, ಡಿವೈಎಸ್‌ಪಿ ಮಾರ್ಗದಶರ್ನದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಲಭ್ಯವಿರುವ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿಗಳು, ಟೋಲ್ ಗೇಟ್‌ಗಳಲ್ಲಿ ಪರಿಶೀಲನೆ ನಡಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.