ರಾಜ್ಯದಲ್ಲಿ ಹೆಚ್ಚಾದ ಡೆಂಗ್ಯೂ ಭೀತಿ: 7 ಸಾವಿರ ಗಡಿ ದಾಟಿದ ಪ್ರಕರಣ: ಭಯ ಹುಟ್ಟಿಸುತ್ತಿದೆ ಅಂಕಿ-ಅಂಶ.!

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ 195 ಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,317ಕ್ಕೆ ಏರಿಕೆಯಾಗಿದೆ. ರಾಜ್ಯದೆಲ್ಲೆಡೆ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ 195 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಪ್ರಸಕ್ತ ವರ್ಷದ ಒಟ್ಟಾರೆ ಪ್ರಕರಣಗಳು 7 ಸಾವಿರದ ಗಡಿ ದಾಟಿವೆ. ಅಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂವರೆ ತಿಂಗಳು ಮುಂಚೆಯೇ ಪ್ರಕರಣಗಳು 7 ಸಾವಿರದ ಗಡಿ ದಾಟಿವೆ. ಬೆಂಗಳೂರು ನಗರ ಸೇರಿ 23 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿವೆ. ಕಳೆದ ವರ್ಷ ರಾಜ್ಯದಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 7,189 ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಈ ವರ್ಷ ದೃಢಪಟ್ಟಿರುವ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಶೇ. 40 ರಷ್ಟು ಅಂದರೆ 1,227 ಡೆಂಗ್ಯೂ ಕೇಸ್ ಬೆಂಗಳೂರಿನಲ್ಲೇ ಪತ್ತೆಯಾಗಿದೆ.