ಕೊನೆಗೂ ಬದುಕುಳಿಯಲೇ ಇಲ್ಲ ವಿದ್ಯಾರ್ಥಿನಿ ಶಿಲ್ಪ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪ ಸಾವನ್ನಪ್ಪಿದ್ದಾಳೆ. ಅ. 10 ರಂದು ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ ಹರಿದು ಗಂಭೀರ ಗಾಯಗೊಂಡು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಬಂಗಾರಪೇಟೆ ಮೂಲದ ವಿದ್ಯಾರ್ಥಿನಿ ಶಿಲ್ಪ ಬೆಂಗಳೂರು ವಿವಿನಲ್ಲಿ ಎಂ.ಎಸ್.ಸಿ ಮ್ಯಾಥಮೆಟಿಕ್ಸ್ ವ್ಯಾಸಾಂಗ ಮಾಡುತ್ತಿದ್ದಳು. ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಗೆ, ಈವರೆಗೆ ಬರೋಬ್ಬರಿ 7 ಸರ್ಜರಿಯನ್ನು ವೈದ್ಯರು ಮಾಡಿದ್ದರು. ಆದರೆ ಇಂದು ಮುಂಜಾನೆ 4:30 ರ ಸುಮಾರಿಗೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.

ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಶಿಲ್ಪಾಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಆಸ್ಪತ್ರೆ ಬಳಿ ಮೃತ ವಿದ್ಯಾರ್ಥಿನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯತ್ತ ವಿದ್ಯಾರ್ಥಿನಿ ಶಿಲ್ಪ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಇಂದು ಸಂಜೆ ವೇಳೆಗೆ ವಿದ್ಯಾರ್ಥಿನಿ ಅಂತ್ಯಕ್ರಿಯೆ ನೆರವೇರಲಿದೆ.

ನಮ್ಮ ತಂದೆಗೆ ನಾವೇ ಆಸ್ತಿ, ನಮಗೆ ಶಿಕ್ಷಣವನ್ನೇ ಆಸ್ತಿಯಾಗಿ ನೀಡಿದ್ದಾರೆ. ನಮ್ಮ ತಂಗಿ ಮನೆಗೆ ಒಂದು‌ ಕಳೆ ರೀತಿ ಇದ್ದಳು. ಅವಳು ಇಲ್ಲ ಅನ್ನೊ ನೋವು ಸಹಿಸಿಕೊಳ್ಲೋಕೆ ಆಗ್ತಿಲ್ಲ. ಅವಳು ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆ ಇಟ್ಟುಕೊಂದಿದ್ದಳು. ನಮ್ಮ‌ ತಂದೆಗೆ ನಾವು ಮೂರು ಜನರು ಹೆಣ್ಣು ಮಕ್ಕಳು. ಕೂಲಿ ಮಾಡಿ ನಮ್ಮನ್ನ ಸಾಕಿ ವಿಧ್ಯಾಭ್ಯಾಸ ಕೊಡಿಸಿದ್ದಾರೆ. ನಮ್ಮ ಕುಟುಂಬದ ಯಾರಿಗಾದ್ರೂ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಲಿ. ಏನಾದ್ರೂ ಪರಿಹಾರ ಕೊಡಿಸಿ ಎಂದು ಮೃತ ವಿದ್ಯಾರ್ಥಿನಿ ಶಿಲ್ಪ ಸಹೋದರಿ ನಂದಿತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.