ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ ರಷ್ಯಾ.! ಡ್ರೋನ್ ಬಳಸಿ ಕೀವ್ ನಗರಗಳ ಮೇಲೆ ದಾಳಿ

ಉಕ್ರೇನ್: ಯುದ್ಧದ ವರಸೆ ಬದಲಿಸಿ ಕಳೆದ ವಾರವಷ್ಟೇ ಮತ್ತೆ ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಆರಂಭಿಸಿದೆ. ಈ ಬಾರಿ ಕ್ಷಿಪಣಿ ಬದಲು ಇರಾನಿ ನಿರ್ಮಿತ ಕ್ಯಾಮಿಕೇಜ್‌ ಡ್ರೋನ್‌ಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

ಇದರಿಂದಾಗಿ ಕೀವ್‌ ನಗರವು ಸ್ಫೋಟದಿಂದ ತತ್ತರಿಸಿದ್ದು, ನೂರಾರು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಈ ದಾಳಿಯಲ್ಲಿ 8 ಜನರು ಬಲಿಯಾಗಿರುವುದಾಗಿ ಉಕ್ರೇನ್‌ ಸರ್ಕಾರ ಮಾಹಿತಿ ನೀಡಿದೆ. ಶಹೀದ್‌ ಡ್ರೋನ್‌ಗಳಲ್ಲಿ ಸ್ಫೋಟಕ ತುಂಬಿ ನಿರ್ದಿಷ್ಟ ಗುರಿ ನಿಗದಿಪಡಿಸಿ ಪ್ರಯೋಗಿಸಲಾಗುತ್ತಿದ್ದು, ನಿರ್ದಿಷ್ಟ ಗುರಿಗೆ ತಲುಪಿ ಸ್ಫೋಟಗೊಂಡು ಭಾರಿ ಸಾವು ನೋವು, ವಿನಾಶ ಉಂಟುಮಾಡುತ್ತವೆ. ಕ್ಷಿಪಣಿಯಷ್ಟೇ ಈ ಡ್ರೋನ್ ಗಳು ಶಕ್ತಿಶಾಲಿ ಆಗಿವೆ. ಕಳೆದ ವರ್ಷ ಇರಾನ್‌ನಿಂದ 1000 ಶಹೀದ್‌ ಡ್ರೋನ್‌ಗಳನ್ನು ರಷ್ಯಾ ಖರೀದಿಸಿತ್ತು.

ಕೀವ್‌ ಮೇಲೆ 28 ಡ್ರೋನ್‌ ಬಳಸಿ ದಾಳಿ ನಡೆಸಿದ್ದು, 13 ಡ್ರೋನ್‌ಗಳನ್ನು ಉಕ್ರೇನ್‌ ಸೇನೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ದಾಳಿಯ ಭೀಕರತೆಗೆ ಕೀವ್‌ನ ಅಪಾರ್ಟ್‌ಮೆಂಟೊಂದು ಸಂಪೂರ್ಣ ಧ್ವಂಸಗೊಂಡಿದೆ. ಅದರೊಳಗೆ ಸಿಲುಕಿದ್ದ 18 ಮಂದಿಯನ್ನು ರಕ್ಷಿಸಲಾಗಿದೆ. ನಗರದಾದ್ಯಂತ ಭಾರಿ ಹೊಗೆ ಆವರಿಸಿದ್ದು, ಎಲ್ಲೆಡೆ ದಾಳಿಗೆ ಒಳಗಾದ ಕಟ್ಟಡಗಳ ಅವಶೇಷಗಳು ಕಂಡುಬರುತ್ತಿವೆ.