ಬೆಂಗಳೂರು: ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್‌ಲೈನ್ ಎಮಿರೇಟ್ಸ್ A380 ಇಂದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಈ ಮೂಲಕ ದುಬೈ-ಬೆಂಗಳೂರು ವಿಮಾನ ಸೇವೆ ಆರಂಭವಾಗಲಿದೆ.
ಈ ವಿಮಾನವು ದುಬೈನಿಂದ ಶುಕ್ರವಾರ ಬೆಳಗ್ಗೆ 10 ಕ್ಕೆ ಹೊರಟಿದ್ದು, ಮಧ್ಯಾಹ್ನ 3:40 ಕ್ಕೆ ಬೆಂಗಳೂರಿಗೆ ಬಂದಿಳಿಯಲಿದೆ. ಡಬಲ್ ಡೆಕ್ಕರ್ ವಿಮಾನವಾಗಿರುವ ಇದು 500 ಕ್ಕಿಂತಲೂ ಹೆಚ್ಚು ಜನರನ್ನು ಹೊರುವ ಸಾಮರ್ಥ್ಯ ಹೊಂದಿದೆ. ಈ ವಿಮಾನವು 510 ರಿಂದ 575 ಟನ್‌ಗಳಷ್ಟು ತೂಕವನ್ನು ಹೊಂದಿದ್ದು, 72.7 ಮೀ. ಉದ್ದ ಮತ್ತು 24.1 ಮೀ. ಎತ್ತರವಿದೆ. ಈ ವಿಮಾನವು ಬೋಯಿಂಗ್ 777 ವಿಮಾನಕ್ಕಿಂತ 45 % ರಷ್ಟು ಹೆಚ್ಚು ಆಸನಗಳನ್ನು ಹೊಂದಿದೆ. ಈ ವಿಮಾನವನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.