ಭಟ್ಕಳ: ಶಾಸಕ ಸುನೀಲ್ ನಾಯ್ಕರ ನಿವಾಸದಲ್ಲಿ ಮಳೆಯಲ್ಲೂ ಯಕ್ಷಗಾನ ವೀಕ್ಷಿಸಿ, ಯಕ್ಷ ವೇಷ ತೊಟ್ಟು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಎಲ್ಲರ ಗಮನ ಸೆಳೆದಿದ್ದಾರೆ.
ಸರ್ಕಾರಿ ಆಸ್ಪತ್ರೆ ಭೇಟಿ ಹಾಗೂ ಪರಿಶೀಲನೆ ಹಿನ್ನೆಲೆ ನಿನ್ನೆ ಭಟ್ಕಳಕ್ಕೆ ತೆರಳಿದ್ದ ಡಾ. ಸುಧಾಕರ್, ಜಾಲಿಯಲ್ಲಿ ತಡರಾತ್ರಿ ಆಯೋಜಿಸಿದ್ದ ಯಕ್ಷಗಾನವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನೀಲ್ ನಾಯ್ಕ ಜೊತೆ ವೀಕ್ಷಣೆ ಮಾಡಿದರು. ಕಲಾವಿದರು ಭೀಷ್ಮ ವಿಜಯ ಯಕ್ಷಗಾನವನ್ನು ಪ್ರದರ್ಶಿಸಿದರು. ಈ ವೇಳೆ ಮಳೆಯಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಸಚಿವರುಗಳು ಯಕ್ಷಗಾನ ವೀಕ್ಷಿಸಿದ್ದಾರೆ.
ಈ ವೇಳೆ ಕಲಾವಿದರು ಡಾ. ಸುಧಾಕರ್ ಅವರಿಗೆ ಯಕ್ಷಗಾನದ ವೇಷ ತೊಡಿಸಿ ಸನ್ಮಾನಿಸಿದರು. ಡಾ.ಸುಧಾಕರ್ ಯಕ್ಷ ಪಾತ್ರಧಾರಿಯಾಗಿ ಫೋಟೊಗಳಿಗೆ ಪೋಸ್ ನೀಡಿ ಸಂತಸಪಟ್ಟರು. ನಂತರ ಯಕ್ಷಗಾನದ ವೇಷಭೂಷಣದ ಬಗ್ಗೆ ಗೌರವ ಹಾಗೂ ಯಕ್ಷಕಲಾವಿದರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಕಲಾವಿದರನ್ನು ಸನ್ಮಾನಿಸಿದರು.