ಗುಜರಾತ್: 36 ನೇ ರಾಷ್ಟ್ರೀಯ ಕ್ರೀಡಾಕೂಟದ ರೇಸ್ ವಾಕ್ ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಸಾಮಾನ್ಯ ಕೂಲಿ ಕಾರ್ಮಿಕ ವ್ಯಕ್ತಿಯೋರ್ವ ಇಡೀ ದೇಶದ ಗಮನ ಸೆಳೆದಿದ್ದಾನೆ. ಉತ್ತರ ಪ್ರದೇಶದ ರಾಮ್ ಬಾಬು ಈ ದಾಖಲೆ ಬರೆದ ವ್ಯಕ್ತಿ.
ರಾಮ್ ಬಾಬು ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಿಗಿಸಿಕೊಂಡಿರುವ ಕ್ರೀಡಾಪಟುವಲ್ಲ. ಲಾಕ್‌ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿ, ಹೊತ್ತಿನ ಊಟಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ರಾಮ್ ಬಾಬು ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದಾನೆ. ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ 35 ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಕೇವಲ 2:36.32 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಹೊಸ ದಾಖಲೆ ಬರೆದ್ದಾನೆ.
ಇದರ ಬಗ್ಗೆ ಮಾತನಾಡಿದ ರಾಮ್ ಬಾಬು, ಇಂತಹದೊಂದು ಸಾಧನೆ ಖುಷಿ ಕೊಡುತ್ತದೆ. ನಾನು ಯಾವತ್ತೂ ಇಂತಹ ಯಾವುದೇ ಸಾಧನೆ ಮಾಡಿರಲಿಲ್ಲ. ಈ ಹಿಂದೆ ನಾನು ವಾರಣಾಸಿಯಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದೆ. ಇದಾದ ಬಳಿಕ ಕೊರಿಯರ್ಗಾಗಿ ಗೋಣಿ ಚೀಲಗಳನ್ನು ಹೊಲಿಯುತ್ತಿದ್ದೆ. ಲಾಕ್‌ಡೌನ್ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ವಿವಿಧ ಗ್ರಾಮಗಳ ಯೋಜನೆಗಳಿಗೆ ಮಣ್ಣನ್ನು ಅಗೆಯಬೇಕಾಗಿತ್ತು. ಇಲ್ಲಿ ನಮಗೆ ನಿಗದಿ ಪಡಿಸಲಾದ ಕೆಲಸಕ್ಕೆ ಅನುಗುಣವಾಗಿ ದೈನಂದಿನ ವೇತನವನ್ನು ನಿರ್ಧರಿಸುತ್ತಾರೆ. 7 ನೇ ತರಗತಿ ಮಾತ್ರ ಓದಿದ್ದರಿಂದ ನನಗೆ ಕೂಲಿ ಕೆಲಸಗಳೇ ಜೀವನಕ್ಕೆ ದಾರಿಯಾಗಿತ್ತು.
ಇದೀಗ ರೇಸ್ ವಾಕ್ನಲ್ಲಿ ದಾಖಲೆ ಬರೆದಿದ್ದೇನೆ ಎಂಬುದು ಗೊತ್ತಾಗಿರುವುದು ಸಂತಸ ನೀಡಿದೆ. ಆದರೆ ನಾನು ಕಠಿಣ ತರಬೇತಿ ಪಡೆದಿದ್ದರಿಂದ ದಾಖಲೆಯನ್ನು ಮುರಿಯುತ್ತೇನೆ ಎಂದು ಗೊತ್ತಿತ್ತು. ಅಭ್ಯಾಸದಲ್ಲಿ 40 ಕಿಮೀ ಸೆಟ್‌ಗಳನ್ನು ನಡೆಯುತ್ತಿದ್ದೆ. ಇದರಿಂದ ನಾನು 35 ಕಿಮೀ ಅನ್ನು ಸುಲಭವಾಗಿ ಗುರಿ ಮುಟ್ಟಿದ್ದೇನೆ. ಆ ನಂತರ ನನ್ನ ಮನಸ್ಸಿನಲ್ಲಿ ಮೂಡಿ ಬಂದ ಮೊದಲ ಆಲೋಚನೆ ಎಂದರೆ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂಬುದು. ಇದೀಗ ಈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಓಪನ್ ನ್ಯಾಷನಲ್ ಗೇಮ್ಸ್ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ರಾಮ್ ಬಾಬು ಹೇಳಿದ್ದಾರೆ.