ಕಾರಾಗೃಹ ಇಲಾಖೆಯ ಡಿಜಿಪಿ ಎಚ್. ಕೆ ಲೋಹಿಯಾ ಕೊಲೆ: ಮನೆ ಸಹಾಯಕ ನಾಪತ್ತೆ

ಜಮ್ಮುಕಾಶ್ಮೀರ: ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಚ್. ಕೆ ಲೋಹಿಯಾ ಅವರು ಸೋಮವಾರ ಅನುಮಾನಾಸ್ಪದವಾಗಿ ಉದಯವಾಲಾ ನಿವಾಸದಲ್ಲಿ ಕೊಲೆಯಾಗಿದ್ದಾರೆ. ಮನೆಯ ಸಹಾಯಕನೇ ಅವರನ್ನು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಲೋಹಿಯಾರನ್ನು ಆಗಸ್ಟ್‌ನಲ್ಲಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನಿಯೋಜಿಸಲಾಗಿತ್ತು. 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಲೋಹಿಯಾ ಅವರು ಜಮ್ಮುವಿನ ಹೊರವಲಯದ ತಮ್ಮ ನಿವಾಸದಲ್ಲಿ ನೆಲೆಸಿದ್ದರು. ಅಲ್ಲಿಯೇ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಮನೆ ಸಹಾಯಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಆರಂಭಿಸಲಾಗಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.

ವಿಧಿವಿಜ್ಞಾನ ಮತ್ತು ಅಪರಾಧ ತಂಡಗಳು ಸ್ಥಳಕ್ಕೆ ಧಾವಿಸಿವೆ. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲೋಹಿಯಾ ಸಾವಿಗೆ ಜಮ್ಮುಕಾಶ್ಮೀರ ಪೊಲೀಸ್ ಇಲಾಖೆ ತೀವ್ರ ಬೇಸರ ವ್ಯಕ್ತಪಡಿಸಿದೆ.