ಮಂಗಳೂರಿನಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಯಾತ್ರೆ ಕೈಗೊಂಡಿರುವ ಇಬ್ಬರು ಯುವಕರಿಗೆ ಭಟ್ಕಳದಲ್ಲಿ ಭವ್ಯ ಸ್ವಾಗತ.!

ಭಟ್ಕಳ: ರಾಷ್ಟ್ರದ ಯುವ ಜನತೆಗೆ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವಗಳ ಬಗ್ಗೆ ಅರಿವು ಮೂಡಿಸಲು ಮಂಗಳೂರಿನಿಂದ ಕಾಶ್ಮೀರದವರೆಗೆ ಇಬ್ಬರು ಯುವಕರು ಸೈಕ್ಲಿಂಗ್ ಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಭಟ್ಕಳ ಪಲುಪಿದ್ದು, ಪಟ್ಟಣದ ಸಂಶುದ್ದೀನ್ ಸರ್ಕಲನಲ್ಲಿ ಬಿಜೆಪಿ ಮಂಡಲ, ವಿವಿಧ ಸಂಘಟನೆ ಹಾಗೂ ಸಂಘ ಸಂಸ್ಥೆಗಳಿಂದ ಇವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಶ್ರೀನಿಧಿ ಶೆಟ್ಟಿ ಹಾಗೂ ಜಗದೀಶ ಸೈಕಲ್ ಯಾತ್ರೆ ಹೊರಟವರಾಗಿದ್ದು, ಇಬ್ಬರೂ ಮೂಲತಃ ಮಂಗಳೂರಿನ ಬೆಳ್ತಂಗಡಿಯವರಾಗಿದ್ದಾರೆ. ಒಟ್ಟು 3,500 ಕಿಮೀ ನಡೆಯಲಿರುವ ಈ ಸೈಕಲ್ ಯಾತ್ರೆ 10 ರಾಜ್ಯಗಳ ಮೂಲಕ ಕ್ರಮಿಸಿ ಅ. 25 ರಂದು ಕಾಶ್ಮೀರ ತಲುಪಲಿದೆ. ಈ ಯಾತ್ರೆಯು ಅ. 30 ರಂದು ಕಾಶ್ಮೀರದ ಲಾಲ್ ಚೌಕ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಸಂಪನ್ನಗೊಳ್ಳಲಿದೆ.

ಇಬ್ಬರು ಯುವಕರನ್ನು ಸ್ವಾಗತ ಮಾಡಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಜನತೆ ಸೈಕಲನ್ನು ಮರೆತೇ ಹೋಗಿರುವ ಸಂಧರ್ಭದಲ್ಲಿ ಈ ಇಬ್ಬರು ಯುವಕರು ಸೈಕಲ್ ನಲ್ಲಿಯೇ ಕಾಶ್ಮೀರದ ತನಕ ಸೈಕಲ್ ನಲ್ಲಿ ಯಾತ್ರೆಯನ್ನು ಮಾಡುತ್ತಿದ್ದಾರೆ. ಅವರಿಗೆ ಯಾವುದೇ ರೀತಿ ತೊಂದರೆಯಾಗದೆ ತಮ್ಮ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲೆಂದು ಶುಭ ಹಾರೈಸಿದರು.

ನಂತರ ಸೈಕಲ್ ಯಾತ್ರೆಗೆ ಹೊರಟ ಶ್ರೀನಿಧಿ ಶೆಟ್ಟಿ ಮಾತನಾಡಿ, ನಾವು ಈ ಸೈಕಲ್ ಯಾತ್ರೆ ಹೊರಟಿರುವುದು ಎರಡು ಮುಖ್ಯ ಉದ್ದೇಶದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿದೆ. ಮೊದಲಿನ ಉದ್ದೇಶ ಹಸಿರು ನಶಿಸುವ ಮೊದಲು ನಾವು ಹಸಿರಿನತ್ತ ಪಯಣ ಮಾಡಬೇಕು. ಇಂದಿನ ದಿನಗಳಲ್ಲಿ ಪರಿಸರ ನಾಶ ಮಾಡಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಹೀಗೆ ಅಭಿವೃದ್ಧಿ ಹೊಂದುವುದರ ಜೊತೆಯಲ್ಲಿ ಪರಿಸರವನ್ನು ಸಂರಕ್ಷಣೆ ಮಾಡಬೇಕು. ಎರಡನೇ ಮುಖ್ಯ ಉದ್ದೇಶ ಅಂಗಾಂಗ ದಾನದ ಬಗ್ಗೆ ಆಗಿದ್ದು, ಮನುಷ್ಯ ತಾನು ಸತ್ತ ಮೇಲೆ ಅವನ ಆದರ್ಶ ಹೇಗೆ ಉಳಿಯಿತ್ತದೆಯೋ ಹಾಗೇ ಅವನ ದೇಹದ ಅಂಗಾಂಗಗಳು ಕೂಡ ದಾನ ಮಾಡಿದರೆ ಇನ್ನೊಬ್ಬರ ಬಾಳು ಬೆಳಕಾಗುತ್ತದೆ ಎಂದರು.

ಸೈಕಲ್ ಯಾತ್ರೆಗೆ ಹೊರಡ ಇನ್ನೋರ್ವ ಯುವಕ ಜಗದೀಶ ಮಾತನಾಡಿ, ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲನ ವಿದ್ಯಾರ್ಥಿಗಳಿಗೆ ಒಂದು ತಾಸುಗಳ‌ ಕಾಲ ರಾಷ್ಟ್ರದ ಯುವ ಜನತೆಗೆ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವ ಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಮಾಹಿತಿ ತಿಳಿಸಿ ನಮ್ಮ‌ ಯಾತ್ರೆಯನ್ನು ಮುಂದುವರೆಸುತ್ತ ಹೋಗಲಿದ್ದೇವೆ. ಪ್ರತಿಯೊಬ್ಬರು ಅವರ ಹುಟ್ಟುಹಬ್ಬಕ್ಕೆ ಒಂದು ಗಿಡವನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಟ್ಕಳ ರೋಟರಿ ಕ್ಲಬ್ ಸದಸ್ಯರು ಹಾಗೂ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಶ್ರೀಕಾಂತ ನಾಯ್ಕ, ರಾಮ ಬಳಗಾರ ಹಾಗೂ ಭಟ್ಕಳದ ಸಾರ್ವಜನಿಕರು ಉಪಸ್ಥಿತರಿದ್ದರು.