ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಾದ್ಯಂತ ನಿನ್ನೆ ರಾತ್ರಿಯಿಂದಲೂ ಸುರಿಯುತ್ತಿರುವ ಜಡಿ ಮಳೆ ಇಂದು ಬೆಳಗ್ಗೆಯೂ ಮುಂದುವರಿದಿದೆ. ಬೆಂಗಳೂರಿನ ಬಹುತೇಕ ಕಡೆ ಮಳೆ ಸುರಿದಿದ್ದರಿಂದ ಜನರಿಗೆ ಕಿರಿಕಿರಿ ಉಂಟಾಗಿದೆ. ಮುಂದಿನ ಕೆಲ ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಮಿಂಚು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಹಲವೆಡೆ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಇನ್ನು ರಾಜಧಾನಿಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಕೆಲಸಕ್ಕೆ ಹೋಗುವವರಿಗೆ ಅಡ್ಡಿಯಾಗಿದೆ. ಹೀಗಾಗಿ ಮಳೆಯಲ್ಲೇ ಕೆಲಸ, ಕಾರ್ಯಕ್ಕೆ ತೆರಳಿದ್ದಾರೆ. ನಗರದ ಜೆ.ಪಿ ನಗರ, ರಾಮಕೃಷ್ಣ ಆಶ್ರಮ, ಲಾಲ್ ಬಾಗ್, ಮಾವಳ್ಳಿ, ಜೆಸಿ ರೋಡ್ ಹಾಗೂ ಟೌನ್ ಹಾಲ್, ಕಾರ್ಪೋರೇಷನ್, ಮೈಸೂರ್ ಬ್ಯಾಂಕ್ ಸರ್ಕಲ್, ಮಾರ್ಕೆಟ್, ವಿಲ್ಸನ್ಗಾರ್ಡನ್, ಕೋರಮಂಗಲ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಕಬ್ಬನ್ ಪಾರ್ಕ್, ಶಾಂತಿನಗರ, ಮೈಸೂರು ರೋಡ್, ಚಾಮರಾಜಪೇಟೆ, ಗಾಳಿ ಆಂಜನೇಯ ದೇವಾಲಯ, ವಿಜಯನಗರ, ಬಾಪೂಜಿನಗರ ಸೇರಿದಂತೆ ಹಲವೆಡೆ ಸುತ್ತಮುತ್ತ ಮಳೆ ಸುರಿಯುತ್ತಿದೆ.



