ನವದೆಹಲಿ: ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಅವಿವಾಹಿತ ಮಹಿಳೆಯೊಬ್ಬಳು ವೈದ್ಯಕೀಯವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಸಲ್ಲಿಸಿದ್ದ ಅರ್ಜಿ ಒಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಗಂಡನಿಂದ ಲೈಂಗಿಕ ದೌರ್ಜನ್ಯವು ಅತ್ಯಾಚಾರದ ರೂಪವನ್ನು ಪಡೆಯಬಹುದಾಗಿದ್ದು, ಅಂತಹ ಸಂತ್ರಸ್ತರಿಗೆ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು. ಮಹಿಳೆಯ ವೈವಾಹಿಕ ಜೀವನದಲ್ಲಿ ಅನಗತ್ಯ ಗರ್ಭಧಾರಣೆಯನ್ನು ಸ್ಥಗಿತಗೊಳಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ವೈದ್ಯಕೀಯ ಗರ್ಭಪಾತ ತಿದ್ದುಪಡಿ ಮಸೂದೆ ಮತ್ತು ನಿಯಮಗಳ ಅಡಿಯಲ್ಲಿ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು 24 ವಾರಗಳವರೆಗೂ ಹೊಂದಿರುತ್ತಾರೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖ ಮಾಡಿದೆ.