ರಷ್ಯಾ: ಬಂದೂಕುಧಾರಿಯೊಬ್ಬನ ಗುಂಡಿನ ದಾಳಿಗೆ 7 ಮಕ್ಕಳು ಸೇರಿ 13 ಮಂದಿ ಮೃತಪಟ್ಟ ದಾರುಣ ಘಟನೆ ರಷ್ಯಾದ ಇಝೆವ್ಸ್ಕ್ ಸಿಟಿಯ ಶಾಲೆಯೊಂದರಲ್ಲಿ ನಡೆದಿದೆ. ಘಟನೆಯಲ್ಲಿ 21 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಝೆವ್ಸ್ಕ್ ನಗರದ ಸಂಖ್ಯೆ 88 ರ ಶಾಲೆಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಮೊದಲು ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿ ನಂತರ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾನೆ. ಬಳಿಕ ಶಾಲೆಯ ತರಗತಿಯೊಂದರಲ್ಲಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಶವ ಇದೀಗ ಪೊಲೀಸರಿಗೆ ಪತ್ತೆಯಾಗಿದೆ.
ಇನ್ನು ಶಾಲೆಯಲ್ಲಿ ಸುಮಾರು 1000 ವಿದ್ಯಾರ್ಥಿಗಳು ಮತ್ತು 80 ಶಿಕ್ಷಕರು ಇದ್ದಾರೆ ಎಂದು ತಿಳಿದುಬಂದಿದೆ. ಗವರ್ನರ್ ಅಲೆಕ್ಸಾಂಡರ್ ಬ್ರೆಚಲೋವ್, ಗಾಯಗೊಂಡವರಲ್ಲಿ ಮಕ್ಕಳೇ ಹೆಚ್ಚಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.