ದೇಶಾದ್ಯಂತ 10 ರಾಜ್ಯಗಳಲ್ಲಿ ಎನ್‌ಐಎ, ಇಡಿ ದಾಳಿ.!

ನವದೆಹಲಿ: ದೇಶಾದ್ಯಂತ 10 ರಾಜ್ಯಗಳಲ್ಲಿ ಎನ್‌ಐಎ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ನಾಯಕರನ್ನು ಗುರಿಯಾಗಿಸಿ ಈ ದಾಳಿ ನಡೆದಿದ್ದು, ಹಲವು ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧನ ಮಾಡಲಾಗಿದೆ.

ಕರ್ನಾಟಕ, ಕೇರಳದಲ್ಲಿ ಎನ್‌ಐಎ ಮತ್ತು ಇಡಿ ಮಧ್ಯರಾತ್ರಿಯೇ ಶಾಕ್‌ ನೀಡಿದ್ದು, ಪಿಎಫ್‌ಐ, ಎಸ್‌ಡಿಪಿಐ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಬೆಂಗಳೂರು, ಮಂಗಳೂರು ಸೇರಿ ರಾಜ್ಯದಲ್ಲಿ 8 ಕಡೆ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಕೇರಳದಲ್ಲಿ ಮಧ್ಯರಾತ್ರಿಯಿಂದಲೇ ಎನ್‌ಐಎ ಅಧಿಕಾರಿಗಳು ಸುಮಾರು 50 ಕಡೆ ರೈಡ್ ನಡೆಸುತ್ತಿದೆ. ಅಲ್ಲದೆ, ದೇಶಾದ್ಯಂತ 10 ರಾಜ್ಯಗಳಲ್ಲಿ ರೇಡ್‌ ನಡೆಸಿ 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ 

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್ ಮೇಲೆ ಎನ್‌ಐಎ ಭಾರೀ ಭದ್ರತೆಯೊಂದಿಗೆ ರೇಡ್‌ ಮಾಡಿದ್ದು, ತೀವ್ರ ಪರಿಶೀಲನೆ ನಡೆಸುತ್ತಿದೆ. ಇನ್ನು, ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ್ಐ, ಎಸ್‌ಡಿಪಿಐ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬಜಪೆ, ಜೋಕಟ್ಟೆ ಸೇರಿ ಹಲವೆಡೆ ಮನೆಗಳ ಮೇಲೆ ರೇಡ್‌ ನಡೇಸಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರಿ ಎನ್‌ಐಎ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ,  ಪ್ರತಿಭಟನಾ ನಿರತ ಎಸ್‌ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಸ್ಸಿನಲ್ಲಿ ತುಂಬಿಸಿದ್ದಾರೆ. 

ದೆಹಲಿ ಮತ್ತು ಕೇರಳದಲ್ಲಿ ದಾಖಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಐಎ ಪಾಪ್ಯುಲರ್ ಫ್ರಂಟ್ ಕಚೇರಿಗಳು ಹಾಗೂ ಮುಖಂಡರ ಮನೆಗಳಲ್ಲಿ ಶೋಧ ನಡೆಸಿದೆ. ಪಿಎಫ್‌ಐ ತಿರುವನಂತಪುರ ಜಿಲ್ಲಾ ಸಮಿತಿ ಕಚೇರಿ ಮೇಲೂ ದಾಳಿ ನಡೆಸಲಾಗುತ್ತಿದೆ. ಹಾಗೂ, ಪಿಎಫ್‌ಐ ಮುಖಂಡರಾದ ಅಶ್ರಫ್ ಮೌಲ್ವಿ, ಇ.ಎಂ ಅಬ್ದುಲ್ ರಹಮಾನ್, ಜೈನುದ್ದೀನ್ ಅವರ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ.