ಎಲ್ಲರೂ ವಿದ್ಯುತ್ ಸೌಲಭ್ಯ ಪಡೆಯಬೇಕೆನ್ನುವುದೇ ಬೆಳಕು ಯೋಜನೆಯ ಉದ್ದೇಶ – ಶಾಸಕ ಸುನೀಲ್ ನಾಯ್ಕ್

ಭಟ್ಕಳ: ಎಲ್ಲರೂ ವಿದ್ಯುತ್ ಸೌಲಭ್ಯವನ್ನು ಪಡೆಯಬೇಕೆಂಬ ಉದ್ದೇಶದೊಂದಿಗೆ ನಮ್ಮ ಸರ್ಕಾರ ಇಂದು ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕವನ್ನು ನೀಡುತ್ತಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ಅವರು ಹೆಸ್ಕಾಂ ಕಚೇರಿಯಲ್ಲಿ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕದ ಪಲಾನುಭವಿಗಳಿಗೆ ಮಂಜೂರಿ ಪತ್ರ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡುವ ಯೋಜನೆ ನಮ್ಮ ಸರ್ಕಾರ ಹಮ್ಮಿಕೊಂಡಿದೆ. ಯಾರೂ ಸಹ ವಿದ್ಯುತ್ ಸಂಪರ್ಕದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬೆಳಕು ಯೋಜನೆ ಜಾರಿಗೆ ತರಲಾಗಿದೆ. ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಪಡೆಯದ ಮನೆಗಳಿದ್ದಲ್ಲಿ ಅಂಥವರು ಕೇವಲ ಒಂದು ಅರ್ಜಿಯನ್ನು ನೀಡಿದರೆ ನಾವು ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ನೀಡುತ್ತೇವೆ.

ಈಗಾಗಲೇ ಭಟ್ಕಳದ ಜನತೆಯ ಬಹುಮುಖ್ಯ ಬೇಡಿಕೆಯಾದ 110 ಕೆ.ವಿ. ವಿದ್ಯುತ್ ಸ್ಥಾವರ ಮಂಜೂರಾತಿ ಆಗಿದ್ದು ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇನ್ನು ಮುಂದೆ ಭಟ್ಕಳಕ್ಕೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿದ್ಯುತ್ ನಮ್ಮ ತಾಲೂಕಿಗೆ ತರಲು ಲಿಂಕ್ ಲೈನ್ ಕಾಮಗಾರಿಯನ್ನು ಇಂಧನ ಸಚಿವರು ಮಂಜೂರಿ ಮಾಡಲಿದ್ದಾರೆ. ಭಟ್ಕಳದಲ್ಲಿ ಹೆಸ್ಕಾಂ ಕಚೇರಿಯಲ್ಲಿದ್ದ ಕ್ರೀಯಾಶೀಳ ಅಧಿಕಾರಿಗಳ ಮುತುವರ್ಜಿಯಿಂದ ವಿದ್ಯುತ್ ಸಮಸ್ಯೆಯನ್ನು ಶೀಘ್ರದಲ್ಲಿ ಕೊನೆಗೊಂಡಿದೆ ಎಂದು ಹೇಳಿದರು.

ಹೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕರಾದ ಮಂಜುನಾಥ ಮಾತನಾಡಿ, ಬೆಳಕು ಯೋಜನಯಡಿ ತಾಲೂಕಿನಲ್ಲಿ ಒಟ್ಟೂ 1791 ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಕೆಲವು ಕಡೆ ಬಿಟ್ಟು ಹೋದ ಮನೆಗಳಿದ್ದರೂ ನಮ್ಮ ಇಲಾಖೆಗೆ ತಿಳಿಸಿದರೆ ಅಂಥವರಿಗೆ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಶಾಸಕರ ಪ್ರಯತ್ನದಿಂದ ನಮ್ಮ ಬಹುಮುಖ್ಯ ಬೇಡಿಕೆಯಾದ 110 ಕೆ.ವಿ. ವಿದ್ಯುತ್ ಸ್ಥಾವರ ಹಾಗೂ ಲಿಂಕ್ ಲೈನ್ ವ್ಯವಸ್ಥೆಗೆ ಕಾಮಗಾರಿ ಮಂಜೂರಿಯಾಗಿದೆ. ಇನ್ನು ಮುಂದೆ ನಮಗೆ ವಿದ್ಯುತ್ ಸಮಸ್ಯೆ ಉಂಟಾದರೆ ನಾವು ಸಮೀಪದ ಉಡುಪಿ ಜಿಲ್ಲೆಯಿಂದಲೂ ವಿದ್ಯುತ್ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಮಂಜೂರಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೊನ್ನಾವರ ಹೆಸ್ಕಾಂ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜನೀಯರ್ ಮೋಹನ ಭಾಗ್ವತ, ಯಲ್ವಡಿ ಕವೂರ ಪಂ. ಅಧ್ಯಕ್ಷ ಲಕ್ಷ್ಮಿ ನಾಯ್ಕ, ಮುಟ್ಟಳ್ಳಿ ಪಂ. ಅಧ್ಯಕ್ಷ ಶೇಷಗಿರಿ ನಾಯ್ಕ, ಮಂಜು ಗೊಂಡ, ದೇವಯ್ಯ ನಾಯ್ಕ, ಹೆಸ್ಕಾಂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜು ನಾಯ್ಕ, ಅಣ್ಣಪ್ಪ ಗುಳ್ಳಾರಿ ಉಪಸ್ಥಿತರಿದ್ದರು.