ಪುರಸಭೆಯ ತಪ್ಪು ನಿರ್ಧಾರದಿಂದ ಭಟ್ಕಳದಲ್ಲಿ ಪ್ರಕ್ಷುಬ್ಧ ವಾತಾವರಣ – ಶ್ರೀಕಾಂತ ನಾಯ್ಕ್ ಆರೋಪ

ಭಟ್ಕಳ: ಪುರಸಭೆಯ ತಪ್ಪು ನಿರ್ಧಾರದಿಂದ ಭಟ್ಕಳದಲ್ಲಿ ನಿರಂತರವಾಗಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಪುರಸಭೆ ನಾಮ ನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಹೇಳಿದರು. ಅವರು ನಗರಸಭೆ ಅಧ್ಯಕ್ಷರು ಮಾಡಿದ ಆರೋಪದ ವಿರುದ್ಧ ಆಸರಕೇರಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಾಮಧಾರಿ ಸಮಾಜದ ದ್ವಾರಮಂಟಪ ವಿಚಾರವಾಗಿ ಸಮಾಜದ ಅಧ್ಯಕ್ಷರು ದ್ವಾರಮಂಟಪ ನಿರ್ಮಾಣದ ಕುರಿತು ಪುರಸಭೆಗೆ ಕಳೆದ 5 ತಿಂಗಳ ಹಿಂದೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಅಥವಾ ಹಿಂಬರಹ ಬಂದಿಲ್ಲ. ಅಲ್ಲದೇ ಆ ಪತ್ರದ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲೂ ಮಂಡಿಸಿಲ್ಲ. ಸಾಮಾನ್ಯ ಸಭೆ ಕರೆದು ಎಲ್ಲಾ ಸದಸ್ಯರ ಅಭಿಪ್ರಾಯ ಹಾಗೂ ವಿಶ್ವಾಸ ತೆಗೆದುಕೊಳ್ಳದೇ ತಮ್ಮದೇ ಕೆಲವು ಸದಸ್ಯರ ಸಲಹೆ ಮೇರೆಗೆ ಎಕಪಕ್ಷೀಯ ಹಾಗೂ ಪೂರ್ವನಿಯೋಜಿತ ಪಕ್ಷಪಾತ ದೋರಣೆಯನ್ನು ತೋರಿದ್ದಾರೆ. ಅದೇ ರೀತಿ ದ್ವಾರಮಂಟಪದ ವಿಚಾರವಾಗಿ ಸೆ.12 ರಂದು ಒಂದು ಕೋಮಿನ ಪುರಸಭೆ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿ ನಂತರ ಪುರಸಭೆ ಮುಖ್ಯಾಧಿಕಾರಿಗಳನ್ನು ಸಹಾಯಕ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಿ ದ್ವಾರಮಂಟಪ ನಿರ್ಮಾಣವನ್ನು ಸ್ಥಗಿತಗೊಳಿಸಿ ನೋಟಿಸ್ ನೀಡಿದ್ದಾರೆ.

ಅದೇ ರೀತಿ ಸಭೆ ನಡೆಸಿ ಕಾಮಗಾರಿ ಇನ್ನು ನಡೆಯುತ್ತಿದೆ. ನೀವು ಯಾಕೆ ಕಾಮಗಾರಿ ನಿಲ್ಲಸುತ್ತಿಲ್ಲ. ಕಾಮಗಾರಿಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿಮಾಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೇ ಪುರಸಭೆ ಅಧ್ಯಕ್ಷ ಪತ್ರಿಕಾಗೋಷ್ಠಿ ನಡೆಸಿ ದ್ವಾರ ನಿರ್ಮಾಣ ವಿಚಾರದಲ್ಲಿ ಪುರಸಭೆ ಹಸ್ತಕ್ಷೇಪ ಇಲ್ಲ ಎಂದು ಹೇಳುತ್ತಾರೆ. ಒಂದು ಕಡೆ ಕಾಮಗಾರಿ ನಿಲ್ಲಿಸಲು ಒತ್ತಡ ಹೇರಿ ಪತ್ರಿಕಾಗೋಷ್ಠಿ ನಡೆಸಿ ಪುರಸಭೆ ಸದಸ್ಯರ ಹಸ್ತಕ್ಷೇಪ ಇಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು.

ರಂಜಾನ್ ತಿಂಗಳಲ್ಲಿ ಭಟ್ಕಳ ಪುರಸಭೆಯಲ್ಲಿ ಸಾಮಾನ್ಯ  ಸಭೆ ನಡೆಯುದಿಲ್ಲ. ಕಳೆದ ಮಾರ್ಚ 24 ಕ್ಕೆ ನಡೆದ ಪುರಸಭೆ ಸಾಮಾನ್ಯ ಸಭೆ ಬಳಿಕ ಮೂರು ತಿಂಗಳಾದರೂ ಮತ್ತೆ ಸಾಮಾನ್ಯ ಸಭೆ ನಡೆದಿಲ್ಲ. ಏಪ್ರಿಲ್ ತಿಂಗಳಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲೂ ಸಭೆ ನಡೆಸಿಲ್ಲ. ಬಳಿಕ ಮೇ 2 ಕ್ಕೆ ರಂಜಾನ್ ಹಬ್ಬ ಮುಗಿದ ನಂತರ ಮೇ 17 ಕ್ಕೆ ಸಾಮಾನ್ಯ ಸಭೆ ಇದೆ ಎಂದು ನೋಟಿಸ್ ಕಳುಹಿಸಿದ್ದಾರೆ.  ಆದರೆ ನೀತಿ ಸಂಹಿತೆ ಹಿನ್ನೆಲೆ ಆ ಸಭೆ ಕೂಡ ರದ್ದಾಯಿತು. ನಂತರ ಮೂರು ತಿಂಗಳ ಬಳಿಕ ಜೂನ್ 24 ರಂದು ನಡೆದ ಸಾಮಾನ್ಯ ಸಭೆ ಬಳಿಕ ಇದುವರೆಗೂ ಇನ್ನು ಯಾವುದೇ ಸಾಮಾನ್ಯ ಸಭೆ ನಡೆದಿಲ್ಲ ಎಂದು ಆರೋಪ ಮಾಡಿದರು.

ಜೂನ್ 24 ರ ಸಾಮಾನ್ಯ ಸಭೆಯಲ್ಲಿ ಪುರಸಭೆ ಕಟ್ಟಡಕ್ಕೆ ಹೊಸದಾಗಿ ಸುಣ್ಣ ಬಣ್ಣ ಮಾಡಲಾಗಿದೆ. ಅದರಂತೆ ನಾಮಫಕವನ್ನು ಅಳವಡಿಸುತ್ತೇವೇ ಎಂದು ಫೈಲ್ ಮೂವ್ ಮಾಡಿದ್ದಾರೆ. ಆದರೆ ಸಭೆಯಲ್ಲಿ ಯಾವ ನಾಮ ಫಲಕ ಎಂದು ಯಾರಿಗೂ ಹೇಳಿಲ್ಲ. ಈ ಸಣ್ಣ ತಪ್ಪಿನಿಂದ ಕೆಲ ದಿನ ಭಟ್ಕಳ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಅದೇ ರೀತಿ ನಾಮಧಾರಿ ಸಮಾಜದ ಅಧ್ಯಕ್ಷರು ನೀಡಿದ ಪತ್ರವನ್ನು ಕೂಡ ಸರಿಯಾಗಿ ಪರಿಶೀಲಿಸದೆ ಇರುವುದರಿಂದ  ಮತ್ತೆ
ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದೆ. ಸಣ್ಣ ಸಣ್ಣ ತಪ್ಪಿನಿಂದ ದೊಡ್ಡ ಅವಘಡಗಳಿಗೆ ತಾಲೂಕು ಕಾರಣವಾಗುತ್ತಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಇಂಥಹ ಅವಘಡಗಳು ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳ ಬೇಕು. ಅದೇ ರೀತಿ ಇಂಥಹ ಘಟನೆಗಳು ಮತ್ತೆ ಮರುಕಳಿಸಿದರೆ ಪುರಸಭೆ ಮೇಲೆ ಕ್ರಮ ಕೈಗೊಂಡು ಪುರಸಭೆಯನ್ನು ಸೂಪರ್ ಶೀಟ್ ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಮೇಲೆ ಮಾಡಿದ ಆರೋಪಕ್ಕೆ ಶ್ರೀಕಾಂತ ನಾಯ್ಕ ಪ್ರತಿಕ್ರಿಯಿಸಿ ಶಾಸಕರು ಈಗಾಗಲೇ ಆರೋಪಕ್ಕೆ ಉತ್ತರ  ನೀಡಿದ್ದಾರೆ. ನಾಮನಿರ್ದೇಶಿತರಾದ ನಾವು ಅಧಿಕಾರಿಗಳಿಗೆ ಕೆಲವೊಂದು ವಿಚಾರಗಳನ್ನು ಹೇಳಿದರೆ ಅವರು ಪುರಸಭೆಯಲ್ಲಿ ಹೆಚ್ಚಿನ ಅಧ್ಯಕ್ಷರು ಹೇಳಿದಾಗೆ ಮಾಡುತ್ತಾರೆ. ಪುರಸಭೆಯಲ್ಲಿ ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಂದ ಕೆಲಸವಾಗದೇ ಇದ್ದಾಗ ಶಾಸಕರು ಮೂಲಕ ಹೇಳಿ ಕೆಲಸ ಮಾಡಸುತ್ತೇವೆ. ಇದನ್ನೇ ಶಾಸಕರು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವವರೇ ಪುರಸಭೆ ಅಧ್ಯಕ್ಷರು ಎಂದು ಆರೋಪ ಮಾಡಿದರು.

ನಂತರ ಇನ್ನೋರ್ವ ಪುರಸಭೆ ನಾಮನಿರ್ದೇಶಿತರಾದ ಶ್ರೀಪಾದ ಕಂಚುಗಾರ ಮಾತನಾಡಿ ನಾವು ಪುರಸಭೆ ನಾಮ ನಿರ್ದೇಶಿತರಾಗಿ ಆಯ್ಕೆಯಾಗಿ 5-6 ತಿಂಗಳು ಕಳೆದಿದೆ. ಪುರಸಭೆಯಲ್ಲಿ ತಮಗೆ ಬೇಕಾದದ್ದಕ್ಕೆ ಮಾತ್ರ ಸಭೆಗೆ ಕರೆಯುತ್ತಾರೆ. ಉರ್ದು ನಾಮಫಲಕದ ವಿಚಾರದಲ್ಲಿಯೂ ನಾಮಫಲಕ ಹಾಕುತ್ತೇವೆ ಎಂದು ಸಭೆಯಲ್ಲಿ ಹೇಳಿದರು. ಆದರೆ ಯಾವ ನಾಮಫಲಕ ಎಂದು ಸದಸ್ಯರ ಮುಂದೆ ಹೇಳಿಲ್ಲ. ರಸ್ತೆ ಕಾಮಗಾರಿ ವಿಚಾರದಲ್ಲಿಯೂ ತಾರತಮ್ಯ ಮಾಡುತ್ತಾರೆ. ಪುರಸಭೆ ವ್ಯಾಪ್ತಿಯ ಬಸ್ತಿ ರೋಡ್, ರಘುನಾಥ ರೋಡ್ ಹಾಗೂ ಸ್ಮಶಾನಕ್ಕೆ ತೆರಳುವ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಸಭೆಯಲ್ಲಿ ಚರ್ಚೆ ಮಾಡಿದರೆ ಈ ಬಗ್ಗೆ ಏನು ಮಾತನಾಡಲ್ಲ. ನಾವು ನಾಮನಿರ್ದೇಶಿತರಾಗಿ ಆಯ್ಕೆಯಾಗುವ ಪೂರ್ವದಲ್ಲಿಯೂ ಎಷ್ಟು ಮನವಿ ನೀಡಿದರು ಕ್ರಮ ಕೈಗೊಂಡಿಲ್ಲ. ರಸ್ತೆ ಕಾಮಗಾರಿ ಆಗುವುದಿಲ್ಲ, ದಾರಿ  ದೀಪ ಎಲ್ವೆ ಇಲ್ಲ ಇಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಘವೇಂದ್ರ ಶೇಟ್, ಪುರಸಭೆ ನಾಮನಿರ್ದೇಶಿತರಾದ ಸತೀಶ ನಾಯ್ಕ, ಉದಯ ನಾಯ್ಕ ಹನುಮನಗರ, ರಜನಿ ಪ್ರಭು ಉಪಸ್ಥಿತರಿದ್ದರು.