ಅಂಕೋಲಾ: ಕರಾವಳಿ ಕಾವಲು ಪಡೆ ಕಡಲತೀರವನ್ನು ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ತೀರದಲ್ಲಿ ವಾಸವಾಗಿರುವ ಮೀನುಗಾರರಿಗೆ ಬೀಚ್ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಕಡಲ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮೀನುಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ವಿಭಿನ್ನ ಕ್ರೀಡಾ ಸ್ಪರ್ಧೆಗಳನ್ನ ಆಯೋಜಿಸಿ ಎಲ್ಲರ ಗಮನ ಸೆಳೆದಿದೆ.
ತಾಲೂಕಿನ ಹಾರವಾಡ ಗ್ರಾಮದಲ್ಲಿ ಅಂತರಾಷ್ಟ್ರೀಯ ಕಡಲತೀರದ ಸ್ವಚ್ಚತಾ ದಿನದ ಅಂಗವಾಗಿ ಬೆಲೆಕೇರಿಯ ಕರಾವಳಿ ಕಾವಲು ಪೊಲೀಸ್ ಠಾಣೆಯಿಂದ ಕಡಲ ಸ್ವಚ್ಛತೆಯ ಜೊತೆಗೆ ಮೀನುಗಾರರಿಗಾಗಿ ವಿವಿಧ ಸ್ಪರ್ಧೆಯನ್ನು ಆಯೋಜಿಸಿತ್ತು.
ಕಡಲತೀರ ಸ್ವಚ್ಛತೆ.!
ಜಿಲ್ಲೆಯ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಸ್ಥರು ಹಾರವಾಡದ ಕಡಲತೀರದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿದರು. ತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಬಾಟಲ್, ಬಲೆ ಸೇರಿದಂತೆ ತರಗೆಲೆಯ ತ್ಯಾಜ್ಯವನ್ನ ಒಟ್ಟುಗೂಡಿಸಿ ಬೀಚ್ ಸ್ವಚ್ಛಗೊಳಿಸಿದರು.
ಸ್ಥಳೀಯರಿಗಾಗಿ ವಿವಿಧ ಸ್ಪರ್ಧೆ.!
ಇದೇ ಮೊದಲ ಬಾರಿಗೆ ಸ್ಥಳೀಯರಿಗೆ ಕಡಲತೀರದಲ್ಲಿಯೇ ಹುಟ್ಟಿನ ದೋಣಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಒಟ್ಟೂ 12 ದೋಣಿಗಳಲ್ಲಿ ತಲಾ ಇಬ್ಬರಂತೆ ಮೀನುಗಾರರು ಭಾಗವಹಿಸಿದ್ದು ನಿತ್ಯ ಕಸುಬಿನಲ್ಲಿ ನಿಧಾನವಾಗಿ ದೋಣಿ ಓಡಿಸುತ್ತಿದ್ದವರು ಈ ಭಾರಿ ಸ್ಪರ್ಧೆಗಾಗಿ ಇರುವ ಶಕ್ತಿಯೆನ್ನೆಲ್ಲ ಬಳಸಿ ದೋಣಿ ಓಡಿಸಿ ಎಲ್ಲರ ಗಮನ ಸೆಳೆದರು. ಇನ್ನು ದೋಣಿ ಸ್ಪರ್ಧೆ ಮಾತ್ರವಲ್ಲದೇ ಗುಂಡು ಎಸೆತ, ಹೆಣ್ಣು ಮಕ್ಕಳಿಗೆ ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಹಗ್ಗ ಜಗ್ಗಾಟದಲ್ಲಿ ಸ್ಥಳೀಯ ಮೀನುಗಾರರೇ ನಾಲ್ಕು ತಂಡ ಮಾಡಿಕೊಂಡು ಬಲ ಪ್ರದರ್ಶನ ನಡೆಸಿದ್ದು, ರೋಚಕವಾಗಿದ್ದ ಸ್ಪರ್ಧೆಯನ್ನ ನೋಡುವುದಕ್ಕೆ ವಿದ್ಯಾರ್ಥಿಗಳು, ಸ್ಥಳೀಯರು ನೆರೆದಿದ್ದರು.
ಕಡಲತೀರದ ಮೀನುಗಾರರಿಗೆ ಕೇವಲ ಮೀನುಗಾರಿಕೆ ಮೂಲಕ ಜೀವನ ನಡೆಸುವುದು ಕಷ್ಟವಾಗಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆ ಕಡಲತೀರವನ್ನು ಸ್ವಚ್ಚಗೊಳಿಸಿ ಪ್ರವಾಸಿ ಸ್ನೇಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ. ಅದರಂತೆ ಇಂತಹ ಅಪರೂಪದ ಸ್ಪರ್ಧೆಗಳನ್ನ ಆಯೋಜಿಸಿ ಕಡಲತೀರವನ್ನ ಸ್ವಚ್ಚವಾಗಿಡಲು ಪ್ರಯತ್ನಿಸಲಾಗುತ್ತಿದೆ ಎಂದು ಬೇಲೆಕೇರಿ ಸಿಎಸ್‌ಪಿ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ನಾಯಕ ಹೇಳಿದರು.
ಇದೇ ಮೊದಲ ಬಾರಿಗೆ ಸ್ಥಳೀಯ ಆಡಳಿತ ಹಾಗೂ ಜನರ ಸಹಕಾರ ಪಡೆದು ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದರಿಂದ ನಮ್ಮ ಕಡಲತೀರವನ್ನ ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬುದು ಅರಿವಿಗೆ ಬಂದಿದೆ. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನ ಆಯೋಜನೆ ಮಾಡಬೇಕು.
– ಅಮೂಲ್ಯ ತಾಂಡೇಲ್, ಸ್ಪರ್ಧೆಯಲ್ಲಿ ಪಾಲ್ಗೊಂಡವಳು
ಒಟ್ಟರೆ ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆಯು ಮೀನುಗಾರರೊಂದಿಗೆ ಬೀಚ್‌ನ ಕಸ ಸಂಗ್ರಹಿಸುವುದರ ಜೊತೆಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಕಡಲತೀರದ ಸ್ವಚ್ಛತೆ ಕುರಿತು ಜಾಗೃತಿಯೊಂದಿಗೆ ಪ್ರವಾಸೋದ್ಯಮದ ದೃಷ್ಟಿಯಲ್ಲೂ ಬೀಚ್ ಬಳಕೆ ಮಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.