ಭಟ್ಕಳ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಈಗಲೇ ವಿವಾದಗಳನ್ನು ಸೃಷ್ಟಿಸಿ ಜನರ ಭಾವನೆಗಳನ್ನು ಕೆರಳಿಸುವ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಪರ್ವೆಜ್ ಖಾಸಿಂಜಿ ಹೇಳಿದರು. ಅವರು ಭಟ್ಕಳದ ಪ್ರಸ್ತುತ ದ್ವಾರದ ವಿವಾದದ ಕುರಿತು ಪುರಸಭೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಕೆಲವು ದಿನಗಳಿಂದ ದ್ವಾರಗಳ ಕುರಿತು ವಾದವಿವಾದ ನಡೆಯುತ್ತಿದೆ. ಇದರಲ್ಲಿ ಪುರಸಭೆಯ ಯಾವುದೇ ಸದಸ್ಯರ ಹಸ್ತಕ್ಷೇಪವಿಲ್ಲ. ಆಸರಕೇರಿಯ ದೇವಸ್ಥಾನದ ಮಹಾದ್ವಾರವನ್ನು ಪರವಾನಿಗೆ ಪಡೆಯದೆ ಕಾಮಗಾರಿ ಆರಂಭಿಸಿದ್ದರಿಂದ ಅಧಿಕಾರಿಗಳು ಅದನ್ನು ತಡೆದಿದ್ದಾರೆ. ಇದರ ಕುರಿತು ಮಾರ್ಚ್ 23 ಕ್ಕೆ ಮನವಿ ನೀಡಿದ್ದರು. ಆದರೆ ಅದು ನಮ್ಮ ಗಮನಕ್ಕೆ ಬಂದಿಲ್ಲ. ಪರವಾನಿಗಿಗಾಗಿ ಈಗಷ್ಟೆ ದ್ವಾರದ ಕಡತ ನನ್ನ ಬಳಿ ಬಂದಿದ್ದು, ಅದನ್ನು ಪರೀಶೀಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ವಿ.ಟಿ ರೋಡ್ನಲ್ಲಿ ಮುಸ್ಲಿಂ ಸಮುದಾಯದ ಕೆಲವರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲು ಯತ್ನಿಸಿದ ಅವರ ಮೇಲೂ ಪುರಸಭೆ ಮುಖ್ಯಾಧಿಕಾರಿ ದೂರು ದಾಖಲಿಸಿ ನೋಟಿಸ್ ನೀಡಿದ್ದಾರೆ. ಅವರ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪುರಸಭೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.
ಶಾಸಕರು ಪದೇ ಪದೇ ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪುರಸಭೆಗೆ ಬಂದ ಅನುದಾನವನ್ನು ಅವರೇ ಹಂಚಿಕೆ ಮಾಡುತ್ತಿದ್ದು, ಉಳಿದ ವಾರ್ಡುಗಳಿಗೆ ಅನುದಾನವೇ ಇಲ್ಲದಂತಾಗಿದೆ. ಮೀನು ಮಾರುಕಟ್ಟೆಯನ್ನು ಶಾಸಕರೇ ಉದ್ಘಾಟಿಸಿ, ಈಗ ಸ್ಥಳಾಂತರಕ್ಕೂ ವಿರೋಧ ವ್ಯಕ್ತಪಡಿಸಿಸುತ್ತಿದ್ದಾರೆ. ಪುರಸಭೆ ಅಂಗಡಿ ಮಳಿಗೆ ಹರಾಜು ಹೀಗೆ ವಿವಿಧ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಗಾಲು ಹಾಕುತ್ತಿದ್ದು, ನಮಗೆ ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೈಸರ್ ಸೇರಿ ಇತರರು ಉಪಸ್ಥಿತರಿದ್ದರು.