ಭಟ್ಕಳ: ಮಹಾದ್ವಾರ ಹಾಗೂ ಟಿಪ್ಪು ಗೇಟ್ ವಿವಾದದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಎರಡೂ ಸಮುದಾಯದ ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಷ್ಟು ದಿನಗಳ ಕಾಲ ಸೈಲೆಂಟಾಗಿದ್ದ ರಾಜ್ಯದ ಕರಾವಳಿಯಲ್ಲಿ ಇದೀಗ ಮತ್ತೆ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ವಿವಾದ ಕಾಣಿಸಿಕೊಂಡಿದೆ. ಭಟ್ಕಳ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನವೊಂದಕ್ಕೆ ಮಹಾದ್ವಾರ ನಿರ್ಮಾಣ ಮಾಡಿಸುತ್ತಿದ್ದಂತೇ ಸೆಡ್ಡು ಹೊಡೆದಿರುವ ಮುಸ್ಲಿಂ ಸಮುದಾಯದ ಜನರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಎರಡು ಸಮುದಾಯ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದಲ್ಲದೇ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ. ಇದರಿಂದಾಗಿ ಎರಡು ಸಮುದಾಯದ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ಭುಗಿಲೆದ್ದ ದೇವಸ್ಥಾನ ಮಹಾದ್ವಾರ, ಟಿಪ್ಪು ಗೇಟ್ ನಿರ್ಮಾಣ ವಿವಾದ ದೇವಳದ ಮಹಾದ್ವಾರ ನಿರ್ಮಾಣಕ್ಕೆ ಸೆಡ್ಡು ಹೊಡೆದು ಮುಸ್ಲಿಂ ಸಮುದಾಯದಿಂದ ಟಿಪ್ಪು ಗೇಟ್‌ಗೆ ಸಿದ್ಧತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಸಮುದಾಯದ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧಿಸಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಂ. ದೂರು ನೀಡಿದ್ದು, ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾದ ಅಜಿಮುರ ರೆಹಮಾನ್, ಮೆಡಿಕಲ್ ಸಮಿ, ತಹಿಮುರ ಹಾಗೂ ಇತರರು ಮತ್ತು ನಿಚ್ಚಲಮಕ್ಕಿ ಶ್ರೀ ವೆಂಕಣರಮಣ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರು, ಗುತ್ತಿಗೆದಾರ ಲೋಕೇಶ್ ನಾಯ್ಕ ಹಾಗೂ ಇತರರ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.