ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಕಟ್ಟಡವನ್ನು 8 ದಿನದ ಒಳಗಾಗಿ ಕುಲ್ಲಾ ಪಡಿಸದೆ ಹೋದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಕಾರಣ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಅವರು ಇಂದು ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಆಸರಕೇರಿಯಲ್ಲಿ ನಾಮಧಾರಿ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಬಳಿಕ ನಿರ್ಮಾಣ ಹಂತದಲ್ಲಿರುವ ಮಹಾದ್ವಾರ ಪರಿಶೀಲಿಸಿ ಮಾತನಾಡಿದರು.
ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಆಸರಕೇರಿಗೆ 800 ವರ್ಷ ಇತಿಹಾಸವಿದೆ. ಸಮಾಜದ ಮುಖಂಡರೊಂದಿಗೆ ಈಗಾಗಲೇ ಸಭೆ ನಡೆಸಿದ್ದೇನೆ. ಈ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣಕ್ಕೆ ನಾನು ಮುಂದಾಗಿದ್ದು, ಈಗಾಗಲೇ ಕೆಲಸ ಪ್ರಾರಂಭವಾಗಿದೆ. ದುರುದ್ದೇಶದಿಂದ ಕೆಲಸ ನಿಲ್ಲಿಸುವ ಪ್ರಯತ್ನಕ್ಕೆ ಅನ್ಯಕೋಮಿನವರು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾಡಳಿತವು ಎಂಟು ದಿನದೊಳಗೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿರುವಂತಹ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಆಶ್ವಾಸನೆಯನ್ನು ನೀಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಜಿಲ್ಲಾಡಳಿತಕ್ಕೂ ಕೂಡ ಅವಕಾಶ ನೀಡುವ ಸಲುವಾಗಿ ನಾವು ಎಂಟು ದಿನದವರೆಗೆ ಮಹಾದ್ವಾರ ಕಾಮಗಾರಿಯನ್ನು ಮಾಡದೇ ಇರಲು ನಿರ್ಧರಿಸಿದ್ದೇವೆ. ಎಂಟು ದಿನದ ನಂತರ ನಾವು ದೇವಸ್ಥಾನದ ಮಹಾದ್ವಾರವನ್ನು ಕಟ್ಟೆ ಕಟ್ಟುತ್ತೇವೆ. ಒಂದೊಮ್ಮೆ ಎಂಟು ದಿನದ ಒಳಗೆ ಭಟ್ಕಳದಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನ ಜಿಲ್ಲಾಡಳಿತ ತೆಗೆಯದೇ ಇದ್ದಲ್ಲಿ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ನಂತರ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ ಮಾತನಾಡಿ, ಈ ಮಹಾದ್ವಾರದ ಕಾಮಗಾರಿ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಮಾಡುತ್ತಿದ್ದಾರೆ. ಹಾಗಾಗಿಯೇ ನಾವು ನಿನ್ನೆ ದಿನ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ ಮತ್ತು ಕಾಮಗಾರಿಯ ಸಾಧನ ಸಲಕರಣೆಗಳನ್ನು ಅವರವರಿಗೆ ಮುಟ್ಟಿಸಿದ್ದೇವೆ. ಇಂದು ಬೆಂಗಳೂರಿನಿಂದ ಶಾಸಕರು ಬಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ನಾವು ಕೂಡಾ ಅವರ ಅಭಿಪ್ರಾಯಕ್ಕೆ ಬದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಉಪಾಧ್ಯಕ್ಷ ಭವಾನಿ ಶಂಕರ, ಕಾರ್ಯದರ್ಶಿ ಮಾಸ್ತಿ ನಾಯ್ಕ ಹಾಗೂ 18 ಕೂಟದ ಸದಸ್ಯರು ಉಪಸ್ಥಿತರಿದ್ದರು.