ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ಎಂಟ್ರಿಕೊಟ್ಟ ಒಂಟಿಸಲಗ.!

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ‌ ಮುಂದುವರಿದಿದೆ. ಬೆಳ್ಳಂಬೆಳಿಗ್ಗೆ ಒಂಟಿ ಸಲಗವೊಂದು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಘಟನೆ ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ಗ್ರಾಮದಲ್ಲಿ ನಡೆದಿದೆ.

ರಸ್ತೆಯಲ್ಲಿ ನಿಧಾನವಾಗಿ ಸಾಗಿದ ಗಜ ಮನೆಯೊಂದರ ಸಮೀಪವೇ ಬಂದು ಕೆಲಕಾಲ ನಿಂತಿದೆ. ಕಾಡಾನೆ ಕಂಡ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಕೆಲಕಾಲ ಗ್ರಾಮದೊಳಗೆಲ್ಲ ಸಂಚಾರ ಮಾಡಿದ ಕಾಡಾನೆ ಕಾಫಿ ತೋಟದ ಒಳಗೆ ಬೀಡುಬಿಟ್ಟಿದೆ. ಕಳೆದ ಎರಡು ದಿನಗಳಿಂದ ಬಾಳ್ಳುಪೇಟೆ, ಹೊಂಕರವಳ್ಳಿ ಗ್ರಾಮಕ್ಕೆ ಬೆಳ್ಳಂಬೆಳಿಗ್ಗೆ ಒಂಟಿಸಲಗ ಬರುತ್ತಿದ್ದು ಶಾಲಾ, ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇನ್ನೊಂದೆಡೆ ಜೀವಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ‌. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಒಂಟಿ ಸಲಗವನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.