ಬೆಳಗಾವಿ: ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು ಬಂಧಿತರ ಸಂಖ್ಯೆ 20 ಕ್ಕೆ ಏರಕೆಯಾಗಿದೆ. ಗೋಕಾಕ ತಾಲೂಕಿನ ಅರಭಾವಿ ಪಟ್ಟಣದ ಅಕ್ಷಯ್ ದುಂದಪ್ಪ ಭಂಡಾರಿ (33), ಬೀರಣಗಡ್ಡಿ ಗ್ರಾಮದ ಬಸವರಾಜ ರುದ್ರಪ್ಪ ದುಂದನಟಿ (34), ರಾಜಾಪೂರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22) ಬಂಧಿತ ಆರೋಪಿಗಳು.
ಬಂಧಿತರ ಪೈಕಿ ಅಕ್ಷಯ ಮತ್ತು ಶ್ರೀಧರ್ ಇಬ್ಬರು ಆರೋಪಿಗಳ ಮೇಲೆ ಪರೀಕ್ಷಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟ ಆರೋಪವಿದೆ. ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಕೊಟ್ಟಿದ್ದಾರೆ ಎನ್ನಲಾಗಿದೆ. ಬಂಧಿತರಿಂದ ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್, 18 ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಬಸವರಾಜ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದ ಆರೋಪವಿದ್ದು ಈತನಿಂದ ಒಂದು ಮೊಬೈಲ್, ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಮೂರು ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಳೆದ ತಿಂಗಳು ಆ. 7 ರಂದು ಗೋಕಾಕ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಎದುರಿಸಿ, ಅಕ್ರಮದಲ್ಲಿ ಸಹಾಯ ಸೇರಿದಂತೆ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನ ಮಾರಾಟ ಮಾಡಿದ ಪ್ರಕರಣ ಸಂಬಂಧ ಈಗಾಗಲೇ 17 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದು ಬಂಧಿತರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.