ಚೀನಾ: ಚಾಂಗ್‌ಶಾದಲ್ಲಿನ ಗಗನಚುಂಬಿ ಕಟ್ಟಡದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ಅವಘಡದಲಾದ ಸಾವುನೋವುಗಳ ಸಂಖ್ಯೆ ಇನ್ನೂ ತಿಳಿದಿಲ್ಲ ಎಂದು ತಿಳಿಸಿದೆ.
ಬೆಂಕಿ ಹೊತ್ತಿರುವ ಪ್ರದೇಶದ ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿದೆ. ಬೃಹತ್ ಕಟ್ಟಡದ ಮಹಡಿಗಳು ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿಯುತ್ತಿದೆ ಎಂದು ರಾಜ್ಯ ಬ್ರಾಡ್‌ಕಾಸ್ಟರ್ ನ ಸಿಸಿಟಿವಿ ವರದಿ ಮಾಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾದ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ತಿಳಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ನಗರ ಪ್ರದೇಶದಲ್ಲಿನ ಕಟ್ಟಡವೊಂದು ಹೊತ್ತಿ ಉರಿಯುತ್ತಿದ್ದು ಕಪ್ಪು ಹೊಗೆ ಆಕಾಶದಲ್ಲಿ ಆವರಿಸಿದೆ.
ಸ್ಥಳೀಯ ಸುದ್ದಿವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಗೋಪುರದ ಹೊರಭಾಗವು ಕಪ್ಪು ಸುಟ್ಟುಹೋಗಿರುವುದು ಕಾಣಿಬಹುದಾಗಿದೆ. ಅವಘಡ ನಡೆದ ಹುನಾನ್ ಪ್ರಾಂತ್ಯದ ರಾಜಧಾನಿಯಾದ ಚಾಂಗ್ಶಾದಲ್ಲಿ ಸುಮಾರು 10 ಮಿಲಿಯನ್ ಜನರು ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.