ವಿಧಾನಸಭೆಯಲ್ಲಿ ಬೆಳೆ ಮತ್ತು ಮನೆ ಹಾನಿ ಚರ್ಚೆ: ತಬ್ಬಿಬ್ಬಾದ ಕೃಷಿ ಸಚಿವರು

ಬೆಂಗಳೂರು: ಇಲ್ಲಿಯವರೆಗೂ ರಾಜ್ಯದಲ್ಲಿ ಬೆಳೆ ಮತ್ತು ಮನೆ‌ ಹಾನಿ ಪರಿಹಾರ ಪಾವತಿಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನದಲ್ಲಿ ಆರೋಪಿಸಿದ್ದಾರೆ.

ಅತಿವೃಷ್ಟಿಯ ಚರ್ಚೆಯಲ್ಲಿ ಮಾತನಾಡಿದ ಅವರು, ನಾನು ನಾಲ್ಕೈದು ಕಡೆ ಹೋಗಿದ್ದೆ. ಇಲ್ಲಿಯವರೆಗೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ಪಾವತಿಯಾಗಿಲ್ಲ. 5.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೇಂದ್ರ ನಿಯೋಗಕ್ಕೆ ವರದಿ ನೀಡಲಾಗಿದೆ. ಯಾರೊಬ್ಬರು ಬೆಳೆ ಹಾನಿ ಪರಿಹಾರ ಪಡೆದಿಲ್ಲ ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಬೆಳೆ ಹಾನಿಗಾಗಿ 116 ಕೋಟಿ ರೂ.‌ಹಣ ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆಗೆ 112 ಲಕ್ಷ ರೂ. ಕೊಡಲಾಗಿದೆ ಎಂದು ತಿಳಿಸಿದರು. ಮರು ಪ್ರಶ್ನಿಸಿದ ಸಿದ್ದರಾಮಯ್ಯ ಬಾದಾಮಿಯಲ್ಲಿ ಎಷ್ಟು ರೈತರಿಗೆ ಬೆಳೆ ಹಾನಿ ಪಾವತಿಸಿದ್ದೀರಿ ಎಂದು ಕೇಳಿದಾಗ ಕೃಷಿ ಸಚಿವರು ಉತ್ತರಿಸಲಾಗದೆ ನಾಳೆ ಅಂಕಿ ಅಂಶ ನೀಡುತ್ತೇನೆ ಎಂದು ಹೇಳಿದ್ದಾರೆ.

ಬಳಿಕ ಮತ್ತೆ ಸಚಿವ ಬಿ.ಸಿ.ಪಾಟೀಲ್ ಎದ್ದು ನಿಂತು ಬಾದಾಮಿಯಲ್ಲಿ 169 ರೈತರಿಗೆ 18.5 ಲಕ್ಷ ಪರಿಹಾರ ಜಮಾ ಅಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಎಷ್ಟು ಎಕರೆ ಬೆಳೆ ನಷ್ಟ ಆಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಸಚಿವ ಬಿ.ಸಿ.ಪಾಟೀಲ್ ತಬ್ಬಿಬ್ಬಾಗಿ ನಾಳೆ ಆ ಮಾಹಿತಿ ನೀಡುತ್ತೇನೆ ಎಂದರು.