ಬಿಹಾರ: ರೈಲಿನಲ್ಲಿರುವ ಪ್ರಯಾಣಿಕರೊಬ್ಬರ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯ ಕೈಗಳನ್ನು ಪ್ರಯಾಣಿಕರು ಕಿಟಕಿಯೊಳಗಿಂದ ಹಿಡಿದಿದ್ದರು. ಇದರಿಂದ ರೈಲು ಚಲಿಸುತ್ತಿದ್ದರು ಕಳ್ಳ ಕಿಟಕಿಯಲ್ಲಿ ನೇತಾಡಿ ಒದ್ದಾಡಿದ್ದಾನೆ. ಆತ ಕ್ಷಮಿಸಿ ಬಿಟ್ಟುಬಿಡುವಂತೆ ಎಷ್ಟೇ ಕೇಳಿಕೊಂಡರೂ ಪ್ರಯಾಣಿಕರು ಆತನನ್ನು ಬಿಡದೇ ಮುಂದಿನ ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಗುಸರಾಯ್‌ನಿಂದ ಖಗರಿಯಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಸತ್ಯಮ್ ಕುಮಾರ್ ಎಂಬಾತ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ರೈಲಿನಲ್ಲಿರುವ ಪ್ರಯಾಣಿಕನ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದ.
ಕೂಡಲೇ ಎಚ್ಚೆತ್ತ ಪ್ರಯಾಣಿಕರು ಕಳ್ಳ ಸತ್ಯಮ್‌ನ ಕೈಗಳನ್ನು ಕಿಟಕಿಯಿಂದ ಎಳೆದು ಹಿಡಿದುಕೊಂಡಿದ್ದರು. ರೈಲು ಚಲಿಸಿದರೂ ಆತನ ಕೈಗಳನ್ನು ಬಿಡದ ಕಾರಣ ಆತ ರೈಲಿನ ಬೋಗಿಗೆ ಸುಮಾರು 10 ಕಿ.ಮೀ ವರೆಗೆ ಆತ ನೇತಾಡುತ್ತಲೇ ಇದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.