ಸಿದ್ದಾಪುರಕ್ಕೆ ರೈಲು ಬರುತ್ತೆ ಎಂದು ಕೇವಲ ಮಾತಿನ ರೈಲು ಬಿಡುತ್ತಿದ್ದಾರೆ – ಇಲಿಯಾಸ ಇಬ್ರಾಹಿಂ ಸಾಬ ವ್ಯಂಗ್ಯ

ಸಿದ್ದಾಪುರ: ಕಳೆದ 3-4 ವರ್ಷಗಳಿಂದ ಸಿದ್ದಾಪುರಕ್ಕೆ ರೈಲು ಬರುತ್ತೆ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುವ ತಾಲೂಕಿನ ಜನತೆಗೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಇಲ್ಲಿಯ ಸಂಸದರು ಕೇವಲ ಮಾತಿನ ರೈಲು ಬಿಡುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಮುಖಂಡ ಇಲಿಯಾಸ ಇಬ್ರಾಹಿಂ ಸಾಬ ವ್ಯಂಗವಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಈಗಾಗಲೇ ಮಂಜೂರಾಗಿರುವ ತಾಳಗುಪ್ಪಾ-ಸಿದ್ದಾಪುರ ರೈಲು ಮಾರ್ಗದ ಸರ್ವೆ ಕಾರ್ಯ ಮುಗಿದರೂ ಇಲ್ಲಿಯವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಸಾಮಾಜಿಕ ಕಾರ್ಯಕರ್ತ ವಾಸುದೇವ ಬಿಳಗಿ ಈ ರೈಲಿಗಾಗಿ ಅವಿರತ ಹೋರಾಟ ಮಾಡುತ್ತಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿಪತ್ರ ನೀಡಿ ಶೀಘ್ರ ರೈಲು ಮಾರ್ಗ ಕಾಮಗಾರಿಗೆ ಆಗ್ರಹಿಸುತ್ತಿದ್ದಾರೆ. ಈ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಇಲಿಯಾಸ್ ತಿಳಿಸಿದ್ದಾರೆ.