ಭರ್ತಿಯಾಗುತ್ತಿರುವ ಕದ್ರಾ ಜಲಾಶಯ.! ನೀರು ಹೊರ ಬಿಡುವ ಸೂಚನೆ ನೀಡಿದ ಕೆಪಿಸಿಎಲ್.!

ಕಾರವಾರ: ತಾಲೂಕಿನ ಕದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರನ್ನು ಕೃಸ್ಟ್ ಗೇಟ್ ಗಳ ಮೂಲಕ ಹೊರ ಬಿಡಲಾಗುವುದು ಎಂದು ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಅವಧಿಯಲ್ಲಿ ಜಿಲ್ಲಾಡಳಿತವು ನಿಗದಿಪಡಿಸಿರುವ ಕದ್ರಾ ಜಲಾಶಯದ ಗರಿಷ್ಟ ಮಟ್ಟ 31.00 ಮೀ. ಆಗಿದೆ. ಮಂಗಳವಾರ ಬೆಳಿಗ್ಗೆ ಜಲಾಶಯದ ಮಟ್ಟ 31.75 ಮೀ. ತಲುಪಿದ್ದು, ಒಳಹರಿವಿನ ಪ್ರಮಾಣ 15,628 ಕ್ಯುಸೆಕ್ಸ್ ಆಗಿರುತ್ತದೆ. ಆದ್ದರಿಂದ ಜಲಾಶಯದ ಮಟ್ಟ 31.00 ಮೀಟರಗಳನ್ನು ಕಾಯ್ದುಕೊಳ್ಳ ಬೇಕಾಗಿರುವುದರಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಹೊರಬಿಡಲಾಗುವುದು. ಇನ್ನು ಭಾರತೀಯ ಹವಾಮಾನ ಇಲಾಖೆಯು ಸೆ. 13 ರಿಂದ ಸೆ. 14 ರ ವರೆಗೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಕಾಳಿ ಜಲಾಯನ ಪ್ರದೇಶದಲ್ಲಿ ಹೆಚ್ಚಿನ ಒಳಹರಿವು ಬರುವ ಸಂಭವವಿರುತ್ತದೆ.

ಆದ್ದರಿಂದ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಕದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ನಡೆಸದಂತೆ ಕೆಪಿಸಿಎಲ್ ಕದ್ರಾದ ಕಾರ್ಯ ನಿರ್ವಾಹಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.