ಗುಂಡಿಗದ್ದೆ ಜಲಪಾತದಲ್ಲಿ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ಪ್ರವಾಸಿಗನ ಮೃತದೇಹ ಪತ್ತೆ.!

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಗುಂಡಿಗದ್ದೆ ಜಲಪಾತದಲ್ಲಿ ಶನಿವಾರ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಪ್ರವಾಸಿಗನ ಮೃತದೇಹವನ್ನು ಅಗ್ನಿಶಾಮಕ ದಳದವರು ಇಂದು ಪತ್ತೆ ಹಚ್ಚಿದ್ದಾರೆ.

ಘಟನೆಯ ವಿವರ

ಶನಿವಾರ ಮಧ್ಯಾಹ್ನ ಹುಕ್ಕಳಿ ಗ್ರಾಮದ ಗುಂಡಿಗದ್ದೆ ಜಲಪಾತ ವೀಕ್ಷಣೆಗೆ ಮೈಸೂರು, ಬೆಂಗಳೂರು, ಕೋಲಾರ ಮೂಲದ ಒಟ್ಟು 13 ಜನ ಪ್ರವಾಸಿಗರು ಬಂದಿದ್ದರು. ಈ ಪೈಕಿ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುದುಮತ್ತಿ ಗ್ರಾಮದ ರಾಘವೇಂದ್ರ ಗೌಡ ಎಂಬಾತ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ.

ಸಿದ್ದಾಪುರ ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸುರಿಯುವ ಮಳೆಯಲ್ಲಿಯೂ ಶೋಧ ಕಾರ್ಯ ನಡೆಸಿದ್ದು ಭಾನುವಾರ ಸಿದ್ದಾಪುರ-ಕುಮಟಾ ಗಡಿ ಭಾಗದ ಪ್ರದೇಶದಲ್ಲಿ ಪ್ರವಾಸಿಗನ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಕುಮಟಾ ಪೊಲೀಸರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾರ್ಯಾಚರಣೆ ಗೆ ಸಹಕರಿಸಿದ ಸ್ಥಳೀಯರಿಗೆ ಪೊಲೀಸರು ಅಭಿನಂದನೆ ತಿಳಿಸಿದ್ದಾರೆ.