ಅರಣ್ಯ ಸಂಪತ್ತು & ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ – ಶಿವಾಜಿ ಎ. ನಾಲವಾಡೆ

ಕಾರವಾರ: ಅರಣ್ಯ ಮತ್ತು ವನ್ಯಜೀವಿಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಎ. ನಾಲವಾಡೆ ಹೇಳಿದರು. ನಗರದ ಕರ್ನಾಟಕ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ನಾಡಿನ ಅಭಿವೃದ್ದಿಗಾಗಿ ಕಾಡಿನ ನಾಶ ಮಾಡದೇ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು. ಪ್ರತಿಯೊಂದು ಕೆಲಸಗಳು ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಯಾವುದೂ ಹೆಚ್ಚು ಕಡಿಮೆ ಎಂಬುದಿಲ್ಲ. ಮಾಡುವ ಕೆಲಸವನ್ನು ನಿಷ್ಠೆ, ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅಂತಹ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಪ್ರತಿ ಕೆಲಸಕ್ಕೆ, ಕೆಲಸಗಾರರಿಗೆ ಗೌರವ ನೀಡಬೇಕು, ಮಾನವೀಯತೆ ಮೆರೆಯಬೇಕು ಎಂದರು.

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಪ್ರಶಾಂತಕುಮಾರ ಕೆ. ಸಿ. ಮಾತನಾಡಿ, ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಮರಗಳ ಸಂರಕ್ಷಣೆಗಾಗಿ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದು ತಿಳಿಸಿದರು.

ಕಳೆದ 50 ವರ್ಷಗಳಿಂದಲೂ ಅಮೂಲ್ಯ ಅರಣ್ಯ ಸಂಪತ್ತು ಮತ್ತ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ ಅಧಿಕಾರಿ ಮತ್ತು ನೌಕರರ ಸ್ಮರಣೆಗಾಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಹುತಾತ್ಮರ ದಿನಾಚರಣೆಯನ್ನು ರಾಜ್ಯದ ಕೇಂದ್ರ ಸ್ಥಾನದಲ್ಲಿ ಅಷ್ಟೇ ಅಲ್ಲದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಚರಿಸಲಾಗುತ್ತಿದೆ. ಹುತಾತ್ಮ ಸಿಬ್ಬಂದಿಗಳ ಅಸಾಧಾರಣ ಪ್ರಯತ್ನ, ಧೈರ್ಯಶೀಲ ಕಾರ್ಯಗಳು, ಸರ್ವೋಚ್ಚ ತ್ಯಾಗಗಳು, ಅಪಾಯಕ್ಕೆ ಒಳಗಾದ ಸಂದರ್ಭ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದರು.

ಈ ಸಂದರ್ಭದಲ್ಲಿ ಕಾರವಾರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ, ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಜಯೇಶ್, ವಿವಿಧ ಅರಣ್ಯಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಉಅಪಸ್ಥಿತರಿದ್ದರು.