4.24 ಕೋಟಿ ರೂ. ವೆಚ್ಚದ ‘ಖಾರ್ ಲ್ಯಾಂಡ್’ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ರೈತರ ಗದ್ದೆಗಳಿಗೆ ಉಪ್ಪು ನೀರು ನುಗ್ಗುವುದನ್ನು ತಡೆಗಟ್ಟಲು ‘ಖಾರ್ ಲ್ಯಾಂಡ್’ ನಿಂದ ಸಾಧ್ಯ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ 4.24 ಕೋಟಿ ರೂ. ವೆಚ್ಚದಲ್ಲಿ ಖಾರ್ ಲ್ಯಾಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಭಾನುವಾರ ತಾಲೂಕಿನ ಬೆಟ್ಕುಳಿಯ ಬರ್ಗಿ ಮತ್ತು ಹಿರೇಗುತ್ತಿ ಗ್ರಾ.ಪಂ ವ್ಯಾಪ್ತಿಯ ಮೊರಬಾದಿಂದ ಬೆಟ್ಕುಳಿ ವರೆಗಿನ ಖಾರ್ ಲ್ಯಾಂಡ್ ನಿರ್ಮಾಣಕ್ಕೆ ಮಂಜೂರಾದ 4.24 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಮೀನುಗಾರರು ಮತ್ತು ರೈತರು ಖಾರ್ ಲ್ಯಾಂಡ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಭೇಟಿಯಾಗಿ ವಿನಂತಿಸಿದ್ದೆ. ತಕ್ಷಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ನೀಡಿದರು. ಅವರಿಗೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಊರಿನ ಮುಖಂಡ ಬೀರಪ್ಪ ಗೌಡ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಅವರ ಬಳಿ ವಿವಿಧ ರಸ್ತೆ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದ ತಕ್ಷಣ 40 ಲಕ್ಷ ರೂ. ಅನುದಾನ ನೀಡಿದ್ದಾರೆ. ಮಳೆ ಸುರಿಯುತ್ತಿರುವ ಕಾರಣ ವಿಳಂಬವಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ. ಖಾರ್ ಲ್ಯಾಂಡ್ ನಿರ್ಮಾಣದಿಂದ ರೈತರಿಗೆ ಹಾಗೂ ಮೀನುಗಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಚುನಾವಣೆ ಸಮಯದಲ್ಲಿ ನಾವೆಲ್ಲರೂ ದಿನಕರ ಶೆಟ್ಟಿ ಬೆಂಬಲಿಗರಾಗಿ ನಿಲ್ಲಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹಿರೇಗುತ್ತಿ ಗ್ರಾ.ಪಂ ಅಧ್ಯಕ್ಷೆ ನಾಗರತ್ನಾ ಗಾಂವ್ಕರ, ಬರ್ಗಿ ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ,ಉಪಾಧ್ಯಕ್ಷೆ ಪಾರ್ವತಿ ಹರಿಕಾಂತ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರೆ ಅಮಿತಾ ತಳೇಕರ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.