ಶೈಕ್ಷಣಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ಸಿದ್ದಾಪುರ: ತಾಲೂಕಾ ಆಡಳಿತ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಡಳಿತ ಸೌಧದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.

ಹಿರಿಯ ವಕೀಲ ಎನ್‌.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾರಾಯಣಗುರುಗಳ ಅಂದಿನ ಕಾಲದ ಹೋರಾಟ, ಸೇವೆಯನ್ನು ಸ್ಮರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಭಾರತದ ಇತಿಹಾಸದಲ್ಲಿ ತುಳಿತಕ್ಕೊಳಗಾದ ಸಮಯದಾಯಗಳನ್ನು ಮೇಲಕ್ಕೆತ್ತಿದ ನಾರಾಯಣಗುರುಗಳ ಕೊಡುಗೆ ಅಪಾರವಾಗಿದೆ ಎಂದರು.

ಪತ್ರಕರ್ತ ಕನ್ನೇಶ ಕೋಲಶಿರ್ಸಿ ಉಪನ್ಯಾಸ ನೀಡಿ, ಸಾಮಾಜಿಕ ಸ್ಥಿತಿಗತಿಗನುಗುಣವಾಗಿ ನಾರಾಯಣ ಗುರುಗಳು ಧಾರ್ಮಿಕ ಆಚರಣೆಯ ತಾರತಮ್ಯದ ವಿರುದ್ಧ ಸಿಡಿದೆದ್ದಿದ್ದರು. ನಾರಾಯಣಗುರು ಚಳವಳಿ ಹಾಗೂ ವೈಚಾರಿಕತೆಯ ಆಧಾರದಲ್ಲಿ ಅಂಬೇಡ್ಕರ್ ಬಂದರು. ನಮ್ಮ ಸ್ವಾಭಿಮಾನ, ಹಕ್ಕಿನ ಕಾರಣಕ್ಕೆ ನಾರಾಯಣಗುರು ನಮಗೆ ಬೇಕಾಗಿದ್ದಾರೆ ಎಂದರು.

ಸಾಧಕರಿಗೆ ಸನ್ಮಾನ

ಯಕ್ಷಗಾನ ಕಲಾವಿದ ನಂದನ ನಾಯ್ಕ ಹಾರ್ಸಿಕಟ್ಟಾ, ಹಿರಿಯ ವಕೀಲ ಎನ್.ಡಿ.ನಾಯ್ಕ, ಸಾಹಿತಿ ವಿ.ಎಂ.ನಾಯ್ಕ ಅವರಗುಪ್ಪಾ, ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ಪಡೆದ ಕೃಷ್ಣಾಜಿ ಬೇಡ್ಕಣಿ, ಪುನೀತ ರಾಜಕುಮಾರ ಅನಾಥಾಶ್ರಮದ ಮಮತಾ ನಾಯ್ಕ, ಹಿರಿಯರಾದ ಬಿ.ಆರ್.ನಾಯ್ಕ ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಸಂತೋಷ ಭಂಡಾರಿ, ಸಿದ್ದಾಪುರ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷ ವಿ.ಎನ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.