ಗೋಕರ್ಣ: ಸಮಸ್ಯೆಗಳು, ಸವಾಲುಗಳು ಬಂದಾಗ ಧೃತಿಗೆಡದೆ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಿ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧನಾತ್ಮಕ ದೃಷ್ಟಿ ಇದ್ದರೆ ಅಂಥ ಸವಾಲುಗಳು ನಮ್ಮ ಪಾಲಿಗೆ ಭಾಗ್ಯವಾಗಿ ಪರಿವರ್ತನೆಯಾಗುತ್ತದೆ. ಋಣಾತ್ಮಕ ದೃಷ್ಟಿ ಇದ್ದರೆ ಇದು ಸಂಕಟವಾಗಿ ಪರಿಣಮಿಸುತ್ತದೆ ಎಂದು ವಿಶ್ಲೇಷಿಸಿದರು. ಹಲವು ಮಹಾಪುರುಷರು ಇಂಥ ಸವಾಲುಗಳನ್ನು ಎದುರಿಸಿ ಗೆದ್ದ ಕಾರಣದಿಂದಲೇ ಮಹಾತ್ಮರು ಎನಿಸಿಕೊಂಡಿದ್ದಾರೆ ಎಂದು ನುಡಿದರು.
ಜೀವನದ ಹಾದಿಯಲ್ಲಿ ಮುನ್ನಡೆಯುವಾಗ ಸಮಾಜ ಹೂ ಎರಚುತ್ತದೆ ಎಂಬ ನಿರೀಕ್ಷೆ ಬೇಡ. ಜನ ನಮ್ಮೆಡೆಗೆ ಕಲ್ಲು ತೂರುತ್ತಾರೆ ಎಂಬ ಭಾವನೆಯಿಂದ ಧೈರ್ಯವಾಗಿ ಎದುರಿಸಿ. ತೂರಿದ ಕಲ್ಲೇ ನಮ್ಮ ಬದುಕಿನ ಭವ್ಯ ಭವನಗಳಿಗೆ ಸೋಪಾನವಾಗಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಜನಸಾಮಾನ್ಯರು ಮಾತ್ರವಲ್ಲದೇ ರಾಜನಾದವನಿಗೆ ವಿಶೇಷ ದೃಷ್ಟಿ ಬೇಕು. ಒಳನೋಟ, ದೂರದೃಷ್ಟಿ ಅಗತ್ಯ ಎಂದು ವಿವರಿಸಿದರು.
ಭಾಗ್ಯದ ಬಾಗಿಲು ಹೇಗೆ ತೆರೆಯುತ್ತದೆ ಎನ್ನುವುದಕ್ಕೆ ನಿದರ್ಶನ ನೀಡಿದ ಪರಮಪೂಜ್ಯರು, ಒಮ್ಮೆ ಒಬ್ಬ ದೂರದೃಷ್ಟಿಯ ರಾಜ ತನ್ನ ಪ್ರಜೆಗಳನ್ನು ಪರೀಕ್ಷಿಸುವ ಸಲುವಾಗಿ ಮಾರ್ಗಮಧ್ಯದಲ್ಲಿ ದೊಡ್ಡ ಬಂಡೆಯನ್ನಿರಿಸಿ, ಪಕ್ಕದಲ್ಲೇ ಹುದುಗಿ ಕುಳಿತುಕೊಳ್ಳುತ್ತಾನೆ. ಆಸ್ಥಾನ ವರ್ಗ, ವರ್ತಕರು, ಸಾರ್ವಜನಿಕರು ಹೀಗೆ ಎಲ್ಲರೂ ಬಂದು ನೋಡಿ ಪಕ್ಕದಿಂದ ಹಾದುಹೋಗುತ್ತಾರೆ ಹಾಗೂ ಕೆಲವರು ದೊರೆಯನ್ನು ಗೊಣಗಿ, ಬೈದುಕೊಂಡು ಹೋಗುತ್ತಾರೆಯೇ ವಿನಃ ಬಂಡೆಯನ್ನು ಪಕ್ಕಕ್ಕೆ ಸರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಕೊನೆಗೆ ಒಬ್ಬ ರೈತ ಕಾಯಿಪಲ್ಲೆ ಮಾರಲು ತಲೆ ಮೇಲೆ ಹೊರೆ ಹೊತ್ತುಕೊಂಡು ಬರುತ್ತಾನೆ. ಆತ ಹೊರೆ ಇಳಿಸಿ ಬಂಡೆಯನ್ನು ತಳ್ಳುವ ಪ್ರಯತ್ನ ಮಾಡುತ್ತಾನೆ. ಸ್ವಂತ ಶ್ರಮದಿಂದ ಪಕ್ಕಕ್ಕೆ ಸರಿಸುತ್ತಾನೆ. ಜನರಿಗೆ ಅನುಕೂಲವಾಗಲೆಂದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಬಂಡೆ ಸರಿಸಿದ. ಆದರೆ ರೈತ ನೋಡಿದಾಗ ಬಂಡೆಯ ಕೆಳಗೆ ಚಿನ್ನದ ನಾಣ್ಯಗಳಿಂದ ಕೂಡಿದ ಒಂದು ಚೀಲ ಇತ್ತು ಹಾಗೂ ಒಂದು ಪತ್ರದಲ್ಲಿ ಈ ಬಂಡೆಯನ್ನು ಪಕ್ಕಕ್ಕೆ ಸರಿಸಿದವರಿಗೆ ಇದು ನನ್ನ ಉಡುಗೊರೆ ಎಂದು ರಾಜನ ಹಸ್ತಾಕ್ಷರ ಹಾಗೂ ಮುದ್ರೆ ಇದ್ದ ಪತ್ರ ಇತ್ತು. ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಿದ ಸೇವೆಯಿಂದ ಫಲ ದೊರಕುತ್ತದೆ ಎಂದು ಹೇಳಿದರು.
ಈ ಕಥೆಯಲ್ಲಿ ನಮಗೆ ಹಲವು ನೀತಿಗಳಿವೆ. ಎದುರಾಗಿ ಬಂದ ಬಂಡೆಯನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡಿದ್ದರಿಂದ ಆತನ ಬದುಕು ಬಂಗಾರವಾಯಿತು. ಈ ನಿದರ್ಶನ ನಮ್ಮ ಬದುಕಿಗೆ ತೀರಾ ಹತ್ತಿರವಾದದ್ದು. ನಮ್ಮ ಬದುಕಿನಲ್ಲಿ ಬಂಡೆಯ ರೂಪದಲ್ಲಿ ಸಂಕಟ, ವಿಘ್ನಗಳು, ಸಂಕಷ್ಟಗಳು ಎದುರಾಗುತ್ತವೆ. ಇದಕ್ಕೆ ಬೇರೆಯವನ್ನು ಬೈದು ಸುಮ್ಮನಾಗುತ್ತೇವೆ. ತಮಗೆ ಬಂದ ಕಷ್ಟಕ್ಕೆ ಇನ್ನೊಬ್ಬರನ್ನು ಹೊಣೆ ಮಾಡಿ ಮಾತನಾಡುತ್ತೇವೆಯೇ ವಿನಃ ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ನಾವು ನಮ್ಮ ಪ್ರಯತ್ನ ಮಾಡಬೇಕು. ಅಂತೆಯೇ ಶುಭ ದೃಷ್ಟಿ ಬೇಕು. ನಮ್ಮ ದೃಷ್ಟಿಯನ್ನು ಬದಲಿಸಿಕೊಂಡಾಗ ಎದುರು ಬಂದ ಬಂಡೆ ಕೂಡಾ ಭಾಗ್ಯವಾಗಿ ಬರಬಹುದು. ಅದನ್ನೇ ನಾವು ಋಣಾತ್ಮಕವಾಗಿ ನೋಡಿದರೆ ಭಾಗ್ಯವೂ ಬಂಡೆಯ ರೂಪದಲ್ಲಿ ನಮಗೆ ಎದುರಾಗಬಹುದು ಎಂದು ವಿಶ್ಲೇಷಿಸಿದರು.
ನೋಡುವ ದೃಷ್ಟಿಯಿಂದ ಶಿಲೆಯೂ ಶಂಕರನಾಗಬಹುದು. ಇಲ್ಲದಿದ್ದರೆ ಸಾಕ್ಷಾತ್ ಶಿವನೇ ಬಂದರೂ ಕಲ್ಲಾಗಿ ಕಾಣುತ್ತೇವೆ ಎಂದು ಹೇಳಿದರು.
ಸಚಿವ ಅಂಗಾರ, ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್, ಉದ್ಯಮಿ ಜಿ. ಎಂ. ಹೆಗಡೆ ಮತ್ತಿತರ ಗಣ್ಯರು ಶ್ರೀಗಳಿಂದ ಆಶೀರ್ವಾದ ಪಡೆದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಅಂಗವಾಗಿ ರುದ್ರಹವನ, ಚಂಡಿ ಪಾರಾಯಣ, ರಾಮತಾರಕ ಹವನ, ಘನ ಪಾರಾಯಣ, ಚಂಡಿಹವನ, ಮಾತೆಯರಿಂದ ಕುಂಕುಮಾರ್ಚನೆ ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಅಜೇರು ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಅವರಿಂದ ತೆಂಕು- ಬಡಗು ತಿಟ್ಟಿನ ಯಕ್ಷ ಗಾಯನೋತ್ಸವ ನಡೆಯಿತು.