ಉಮೇಶ್ ಕತ್ತಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಶಾಸಕಿ ರೂಪಾಲಿ ನಾಯ್ಕ್

ಕಾರವಾರ: ಹೃದಯಾಘಾತದಿಂದ ನಿಧನರಾದ ಆಹಾರ ಮತ್ತು ಅರಣ್ಯ ಸಚಿವ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರಕ್ಕೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ಎಸ್‌. ನಾಯ್ಕ ಅವರು ಬುಧವಾರ ಅಂತಿಮ ನಮನ ಸಲ್ಲಿಸಿದರು.

ಬೆಳಗಾವಿಯ ಬೆಲ್ಲದ ಬಾಗೇವಾಡಿಗೆ ತೆರಳಿದ ಶಾಸಕಿ ರೂಪಾಲಿ ಅವರು ಉಮೇಶ ಕತ್ತಿ ಅವರ ಪಾರ್ಥಿವ ಶರೀರ ಕಂಡು ಗದ್ಗದಿತರಾದರು. ಹಾರ ಅರ್ಪಿಸಿ, ಗೌರವ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದರು. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ರೂಪಾಲಿ ಎಸ್.ನಾಯ್ಕ, ನಿನ್ನೆ ಮೊನ್ನೆಯ ತನಕ ನಮ್ಮ ಅಹವಾಲು ಆಲಿಸಿ ಪರಿಹಾರ ಸೂಚಿಸುತ್ತಿದ್ದ ಸಚಿವರು, ಮಾರ್ಗದರ್ಶಕರು, ಹಿತೈಷಿಗಳೂ ಆದ ಉಮೇಶ ಕತ್ತಿ ಅವರು ಹಠಾತ್ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಅವರ ನಿಧನದ ಸುದ್ದಿ ದಿಗ್ಭ್ರಮೆಗೊಳಿಸಿದೆ. ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ.
ಯಾವುದೆ ಸಮಸ್ಯೆ ಎದುರಾದಾಗ ಅವರು ದಾರಿ ತೋರಿಸುತ್ತಿದ್ದರು. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಯಾವುದೆ ಸಮಸ್ಯೆ ಇದ್ದರೂ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದರು. ಸದನದಲ್ಲಿ ಧ್ವನಿ ಎತ್ತುವಾಗ ಧೈರ್ಯ ತುಂಬಿ ಪ್ರೋತ್ಸಾಹ ನೀಡುತ್ತಿದ್ದರು. ಅವರು ಇಷ್ಟು ಬೇಗ ಅಗಲಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ಉಮೇಶ ಕತ್ತಿ ಅವರ ಅತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬ, ಅಭಿಮಾನಿಗಳಿಗೆ ನೋವು ಸಹಿಸುವ ಶಕ್ತಿ ದೊರೆಯಲಿ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.