ಚಿಕ್ಕಬಳ್ಳಾಪುರ: ಭಾರೀ ಮಳೆಗೆ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ಸುಲ್ತಾನಪೇಟೆ ಗ್ರಾಮದ ಭಾಗದಲ್ಲಿ ಎರಡು ಕಡೆ ಭೂಕುಸಿತ ಆಗಿದ್ದು ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತ ಆಗಿದೆ.
ಇನ್ನು ಇದೇ ಸುಲ್ತಾನಪೇಟೆ ಗ್ರಾಮದ ಮತ್ತೊಂದು ಭಾಗದಲ್ಲಿ ಭೂ ಕುಸಿತ ಆಗಿದೆ. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ. ಭೂ ಕುಸಿತ ಆಗಿರೋ ಜಾಗದಲ್ಲಿ ಜಲಪಾತ ಝರಿಯಂತೆ ನೀರು ಧುಮ್ಮಿಕ್ಕುತ್ತಿದೆ.
ಕಳೆದ ವರ್ಷವೂ ಸಹ ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಭೂ ಕುಸಿತ ಆಗಿ ಮೂರು ತಿಂಗಳ ಕಾಲ ರಸ್ತೆ ಸಂಚಾರವೇ ಬಂದ್ ಆಗಿತ್ತು. ಈ ಬಾರಿಯೂ ಸಹ ಭಾರೀ ಮಳೆಯಿಂದ ಭೂ ಕುಸಿತ ಆಗಿದೆ. ರಸ್ತೆಯಲ್ಲಿ ಭೂ ಕುಸಿತ ಉಂಟಾಗದ ಕಾರಣ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಲ್ತಾನಪೇಟೆ ಗ್ರಾಮದ ಬಳಿ ಭೂ ಕುಸಿತ ಆಗಿರೋದ್ರಿಂದ ಬೆಟ್ಟದಿಂದ ಹರಿದುಬರ್ತಿರೋ ನೀರು ಬೆಟ್ಟದ ಕೆಳಭಾಗದ ಜಮೀನುಗಳಿಗೆ ನುಗ್ಗಿದೆ. ಬಂಡೆಗಳು ಉರುಳಿಬರುವ ಆತಂಕ ಗ್ರಾಮಸ್ಥರಿಗೆ ಕಾಡುತ್ತಿದೆ.