ಕಾರವಾರ: ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಅಲ್ಲಿ ನಿತ್ಯವೂ ದೇವರಿಗೆ ಪೂಜೆ ನಡೆಯುತ್ತದೆ. ದೇವರ ದರ್ಶನಕ್ಕೆ ವ್ಯವಸ್ಥೆ ಇರುತ್ತೆ ಅನ್ನೋ ಕಲ್ಪನೆ ನಮ್ಮಲ್ಲಿದೆ. ಆದ್ರೆ ಇಲ್ಲಿನ ದೇವಾಲಯವೊಂದರಲ್ಲಿ ವರ್ಷದಲ್ಲಿ ಭಕ್ತರಿಗೆ ದೇವರ ದರ್ಶನ ಸಿಗುವುದು ಕೇವಲ ಏಳೇ ದಿನ. ಈ ದೇವಿಗೆ ಹರಕೆ ಹೊತ್ತುಕೊಂಡರೆ ಒಂದೇ ವರ್ಷದಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಸಹ ಜನರಲ್ಲಿದ್ದು ವಿವಿಧೆಡೆಗಳಿಂದ ಭಕ್ತ ಸಾಗರವೇ ಈ ದೇವಾಲಯಕ್ಕೆ ಹರಿದು ಬರುತ್ತದೆ. ಅಷ್ಟಕ್ಕೂ ಆ ದೇವಸ್ಥಾನ ಇರೋದಾದ್ರೂ ಎಲ್ಲಿ. ಆ ದೇವಿಯ ವಿಶೇಷತೆಯಾದ್ರೂ ಏನು ಅಂತೀರಾ.? ಮುಂದೆ ಓದಿ.
ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ.!
ಹೌದು.! ಕಾರವಾರದ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಸಾತೇರಿ ದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನವನ್ನ ಕೊಡುವ ಪ್ರತೀತಿ ಇದೆ. ಹೀಗಾಗಿ ಕಳೆದೆರಡು ದಿನಗಳಿಂದ ದೇವಿಯ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ದೇವಿಗೆ ವಿವಿಧ ಸೇವೆಗಳನ್ನು ಅರ್ಪಿಸಿದ ಭಕ್ತರು.!
ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆಗಳನ್ನ ಅರ್ಪಿಸಿ ದರ್ಶನ ಪಡೆದುಕೊಂಡರು. ಇನ್ನು ಜಾತ್ರಾ ಮಹೋತ್ಸವದ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಮಾತ್ರ ದೇವಿ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ. ಬಳಿದ ಉಳಿದ ಐದು ದಿನಗಳು ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿಯೇ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ. ಇಂದು ಸಾರ್ವಜನಿಕ ದರ್ಶನದ ಮೊದಲ ದಿನವಾಗಿದ್ದು ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದುಕೊಂಡರು.
ಕಷ್ಟಗಳನ್ನ ನಿವಾರಿಸುವ ದೇವಿ
ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದರ್ಶನದ ಅವಕಾಶವಿರುವ ಈ ಸಾತೇರಿ ದೇವಿಗೆ ಪೌರಾಣಿಕ ಇತಿಹಾಸವೇ ಇದೆ. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನ ನಿವಾರಿಸುತ್ತಿದ್ದಳಂತೆ.
ಸಾತೇರಿ ದೇವಾಲಯದ ಪೌರಾಣಿಕ ಇತಿಹಾಸವೇನು.?
ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನ ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವಿಯ ಪೋಟೋ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲೀ ದೇವಸ್ಥಾನದಲ್ಲಿ ಅವಕಾಶವಿರುವುದಿಲ್ಲ.
ದೇವಿಯ ದರ್ಶನಕ್ಕೆ ಜನಸಾಗರ.!
ದೇವರನ್ನ ನೋಡಬೇಕಾದರೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ವಿವಿಧೆಡೆಯಿಂದ ಬಂದ ಭಕ್ತರು ದೇವಿಯ ದರ್ಶನವನ್ನ ಪಡೆದುಕೊಳ್ಳುತ್ತಾರೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿಲ್ಲವಾದ್ದರಿಂದ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಸಾತೇರಿ ದೇವಿಯ ದರ್ಶನಕ್ಕೆ ಇನ್ನೂ ನಾಲ್ಕು ದಿನಗಳ ಅವಕಾಶ
ಒಟ್ಟಿನಲ್ಲಿ ಈ ಬಾರಿ ಸಹ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಪ್ರಾರಂಭವಾಗಿದ್ದು ದೇವಿಯ ದರ್ಶನವನ್ನ ಪಡೆಯುವುದಕ್ಕೆ ಇನ್ನೂ ನಾಲ್ಕು ದಿನಗಳ ಕಾಲಾವಕಾಶವಿದೆ. ನೀವೂ ಒಮ್ಮೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಳ್ಳಿ.