ಹೊನ್ನಾವರ: ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡುವ ಶಿಕ್ಷಕರು ನಮಗೆಲ್ಲರಿಗೂ ಒಂದು ಶಕ್ತಿ. ಶಿಕ್ಷಕರು ಉತ್ತಮ ಸಮಾಜದ ನಿರ್ಮಾತೃಗಳು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕಾಡಳಿತ, ತಾ.ಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಹಾಗೂ ವಿಶೇಷ ಸಾಧನೆ ಮಾಡಿದ 10 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಹುಮುಖ ಪ್ರತಿಭೆಯ ಶಿಕ್ಷಕರಾದ ಯಶವಂತ ಮೇಸ್ತ, ಶಾರದಾ ಹೆಗಡೆ, ಕಲ್ಪನಾ ಶೇಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಬಾರಿಯ ಎಸ್.ಎಸ್.ಎಲ್.ಸಿ ಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ತಹಶಿಲ್ದಾರ್ ನಾಗರಾಜ್ ನಾಯ್ಕಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಇಒ ಸುರೇಶ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ, ಸತೀಶ ನಾಯ್ಕ, ನೌಕರರ ಸಂಘದ ತಾಲೂಕಾಧ್ಯಕ್ಷ ಆರ್.ಟಿ.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ ಇತರರು ಉಪಸ್ಥಿತರಿದ್ದರು.