ಬೆಂಗಳೂರು: ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಗೊಂಡಿದೆ. ಹಲವು ಕಡೆಗಳಲ್ಲಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನ ಪರದಾಟ ಅನುಭವಿಸುವಂತಾಗಿದೆ. ರಾಜ್ಯ ರಾಜಧಾನಿಯಲ್ಲಿ ಏನೆಲ್ಲಾ ತೊಂದರೆಗಳಾಗಿದೆ ನೋಡೋಣ.
ಮಾರತಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಮಳೆ ನೀರಿನಲ್ಲಿ ಮುಳುಗಿ ಹೋಗುತ್ತಿರುವ ವೇಳೆ ರಕ್ಷಣಾ ಸಿಬ್ಬಂದಿ ವ್ಯಕ್ತಿಯನ್ನ ಬಚಾವ್ ಮಾಡಿದ್ದಾರೆ. ತಕ್ಷಣಕ್ಕೆ ಸಿಬ್ಬಂದಿ ಆಗಮಿಸಿ, ನೆರವಿಗೆ ಧಾವಿಸಿದ್ದರಿಂದ ವ್ಯಕ್ತಿ ಬಚಾವ್ ಆಗಿದ್ದಾನೆ.
ಇನ್ನು ಸಾರ್ವಜನಿಕರೇ ಬಿಎಂಟಿಸಿ ಬಸ್ಸನ್ನು ರಕ್ಷಣೆ ಮಾಡಿದ ಘಟನೆ ವೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿ ನಡೆದಿದೆ. ನೀರಿನಲ್ಲಿ ಸಿಲುಕಿದ್ದ ಬಿಎಂಟಿಸಿ ಬಸ್ಸನ್ನು ಹಗ್ಗ ಕಟ್ಟಿ ಸಾರ್ವಜನಿಕರೇ ಹೊರಗೆಳೆದಿದ್ದಾರೆ.
ಮಳೆ ನೀರು ರಸ್ತೆಯಲ್ಲೇ ನಿಂತಿದ್ದರಿಂದ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು ಎರಡು ಗಂಟೆಗಳಿಗೂ ಅಧಿಕ ಸಮಯ ವಾಹನಗಳು ನಿಂತಲ್ಲೇ ನಿಂತಿದ್ದವು. ಇದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಸುಮಾರು ಒಂದು ಕಿಲೋ ಮೀಟರ್ ಸಂಚಾರಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡು ರಸ್ತೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸಿದರು.