ಬೆಂಗಳೂರು: ಸಿಇಟಿ ರಾಂಕಿಂಗ್ ಗೊಂದಲ ವಿಚಾರವಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಹೈಕೋರ್ಟ್ ತೀರ್ಪಿನಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ. ಹೀಗಾಗಿ ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದಾಗಿ ಹೇಳಿದ್ದಾರೆ.
ಇನ್ನು ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದ್ದು ತೀರ್ಪು ನೀಡಿರುವ ಏಕ ಸದಸ್ಯ ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ.? ಅಥವಾ ಮೇಲ್ಮನವಿ ಸಲ್ಲಿಸಬೇಕೋ.? ಎನ್ನುವುದನ್ನು ವಕೀಲರ ತೀರ್ಮಾನಿಸುತ್ತಾರೆ. ತ್ವರಿತವಾಗಿ ಯಾವುದು ಆಗುತ್ತೊ ಅದನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅಶ್ವಥ ನಾರಾಯಣ ಹೇಳಿದರು.
ಕೋರ್ಟ್ ತೀರ್ಪನ್ನು ಪಾಲಿಸಲು ಹೋದರೆ ಈ ವರ್ಷ ಸಿಇಟಿ ಬರೆದಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅವರ ರಾಂಕ್ ಪಟ್ಟಿ ದೊಡ್ಡ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಕೋರ್ಟ್ ಮೆಟ್ಟಿಲೇರಿದ್ದವರು ಯಾವುದೋ ಒಂದು ತಾಂತ್ರಿಕ ಅಂಶಕ್ಕೆ ಅಂಟಿಕೊಂಡಿದ್ದಾರೆ. ಹೋದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕೈಗೊಂಡ ತೀರ್ಮಾನ ಸರಿಯಾಗಿದೆ. ಹೋದ ವರ್ಷದ ವಿದ್ಯಾರ್ಥಿಗಳ ಬಗ್ಗೆ ನಮಗೆ ಅಸಮಾಧಾನವೇನಿಲ್ಲ. ನಾವು ಯಾರಿಗೂ ಅನ್ಯಾಯ ಆಗದಂತೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಎಲ್ಲವೂ ನಿಗದಿತ ಕಾಲಮಿತಿಯಲ್ಲೇ ನಡೆಯಲಿದೆ ಎಂದು ತಿಳಿಸಿದರು.