ಬಿಸುಗೋಡ ರಸ್ತೆಯಲ್ಲಿ ಹೊಂಡಗಳದ್ದೇ ರಾಶಿ.! ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡ ವಾಹನ ಸವಾರರು.!

ಯಲ್ಲಾಪುರ: ತಾಲೂಕಿನ ಬಿಸಗೋಡ ರಸ್ತೆ ಹದಗೆಟ್ಟಿದ್ದು, ದೇಹಳ್ಳಿ ಕ್ರಾಸ್ ನಿಂದ ಬಿಸಗೋಡವರೆಗೆ ಸುಮಾರು ಒಂದುವರೆ ಕಿ.ಮೀ ರಸ್ತೆಯಲ್ಲಿ ವ್ಯಾಪಕವಾಗಿ ಹೊಂಡಗಳು ಉಂಟಾಗಿದೆ. ಇದರಿಂದ ಪ್ರತಿನಿತ್ಯ ವಾಹನ ಸವಾರರು ಕೆಸರು ಗುಂಡಿಯನ್ನು ತಪ್ಪಿಸಿ ವಾಹನ ಓಡಿಸುವ ಸವಾಲನ್ನು ಎದುರಿಸುತ್ತಿದ್ದಾರೆ.

ಆನಗೋಡಿಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆಯ ಅಗಲ ಕಡಿಮೆ ಇರುವುದರಿಂದ ರಸ್ತೆಯ ಎರಡು ಪಕ್ಕ ಮಣ್ಣು ಹಾಕಲಾಗಿದೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಎರಡು ವಾಹನಗಳು ಒಮ್ಮೆಲೆ ಪಾಸ್ ಆಗುವುದಿಲ್ಲ. ರಸ್ತೆ ಬಿಟ್ಟು ವಾಹನ ಕೆಳಕ್ಕೆ ಇಳಿಸಿದರೆ, ವಾಹನ ಕೆಸರಲ್ಲಿ ಸಿಕ್ಕಿಕೊಂಡು ಒದ್ದಾಟ ನಡೆಸಬೇಕಾಗುತ್ತದೆ. ಇದು ವಾಹನ ಸವಾರರಿಗೆ ತಲೆನೋವಾಗಿದೆ.

ದೇಹಳ್ಳಿ ಕ್ರಾಸ್ ನಿಂದ ಬಿಸಗೋಡವರೆಗಿನ ಪ್ರಮುಖ ರಸ್ತೆಯಲ್ಲಿ ಹೊಂಡಗಳದ್ದೇ ರಾಶಿ. ಬಸ್ ಇತ್ಯಾದಿ ವಾಹನ ಸವಾರರು ವ್ಯವಸ್ಥೆಯನ್ನು ಶಪಿಸುತ್ತಿದ್ದಾರೆ. ರಸ್ತೆಯ ಹೊಂಡ ತಕ್ಷಣ ಮುಚ್ಚಿ ವಾಹನ ಓಡಾಡಲು ಅನುಕೂಲತೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆ ಹದಗೆಟ್ಟಿದ್ದು, ಮಳೆಗಾಲದ ನಂತರ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗುತ್ತದೆ. ಈ ರಸ್ತೆಯ ಅಭಿವೃದ್ದಿಗೆ ಸಚಿವ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದಿಂದ ಒಂದು ಕೋಟಿ ಅನುದಾನ ಮಂಜೂರಿಯಾಗಿದೆ. ಟೆಂಡರ್ ಪ್ರಕ್ರಿಯೆ ಆಗಬೇಕಿದೆ. ಜಿ.ಪಂ ಗೆ ಸೇರಿದ ರಸ್ತೆ ಸುಧಾರಣೆಗೆ ಪೂರಕ ಕ್ರಮ ತೆಗೆದುಕೊಳ್ಳಲಾಗುವುದು.

– ಡಾ. ರವಿ ಭಟ್ಟ ಬರಗದ್ದೆ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ