ಬೀದರ್: ದಲಿತ ಮಹಿಳೆಯ ಅಂತ್ಯಕ್ರಿಯೆಗೆ ಜಾಗ ನೀಡದಕ್ಕೆ ಗಲಾಟೆ ನಡೆದ ಘಟನೆ ಜಿಲ್ಲೆಯ ಕಮಲಾನಗರ ತಾಲೂಕಿನ ತಪಸ್ಯಾಳ ಗ್ರಾಮದಲ್ಲಿ ನಡೆದಿದೆ. ದಲಿತ ಸಮುದಾಯ ಹಾಗೂ ಜಮೀನು ಮಾಲೀಕನ ನಡುವೆ ಗಲಾಟೆ ನಡೆದಿದ್ದು ಮಹಿಳೆಯ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಭೂಮಿಗೆ ತಂದಾಗ ಮಾಲೀಕ ತಕರಾರು ಎತ್ತಿದ್ದಾನೆ. ಈ ವೇಳೆ ಕೆಲಹೊತ್ತು ಸ್ಥಳದಲ್ಲೇ ಶವವಿಟ್ಟು ದಲಿತ ಸಮುದಾಯ ಪ್ರತಿಭಟನೆ ನಡೆಸಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಪ್ರತಿಭಟನಾಕಾರನ್ನು ಮನವೊಲಿಸಲು ಹರಸಾಹಸಪಡಬೇಕಾಯಿತು.
ಕಳೆದ ನಾಲ್ಕು ದಶಕಗಳಿಂದ ಇದೇ ಸ್ಥಳದಲ್ಲೇ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದೆವೆ. ಈಗಲೂ ಇಲ್ಲೇ ಅಂತ್ಯಕ್ರಿಯೆ ಮಾಡುತ್ತೆವೆ ಎಂದು ಮೃತಳ ಕುಟುಂಬಸ್ಥರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ತಹಶಿಲ್ದಾರ ಭೇಟಿ ನೀಡಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಪ್ರತ್ಯೇಕ 20 ಗುಂಟೆ ಜಾಗ ಮಂಜೂರು ಮಾಡಿದ ನಂತರ ಮೃತ ಮಹಿಳೆಯ ಅಂತ್ಯಕ್ರಿಯೆ ನಡೆಯಿತು.