ಕಾರವಾರ: ಸುದೀರ್ಘ 25 ವರ್ಷಗಳ ಕಾಲ ಬಿ.ಎಸ್.ಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮವಾದ ತಾಲೂಕಿನ ಕಡವಾಡಕ್ಕೆ ಭಾನುವಾರ ಆಗಮಿಸುತ್ತಿರುವ ಬಾಲಕೃಷ್ಣ ಭೋವಿ ಸ್ವಾಗತಕ್ಕೆ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
1999 ರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಬಾಲಕೃಷ್ಣ ಭೋವಿ ಅವರು ಜಮ್ಮುಕಾಶ್ಮೀರ, ಇಂಧೋರ್, ಉದ್ದಮಪುರ್, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ. ಆ. 31 ರಂದು ಸೇವಾ ನಿವೃತ್ತಿ ಪಡೆದ ಇವರು ಸ್ವಗ್ರಾಮಕ್ಕೆ ಮರಳುತ್ತಿದ್ದು, ಸೆ. 4 ರಂದು ಬೆಳಿಗ್ಗೆ 10 ಗಂಟೆಗೆ ಶಿರವಾಡದ ರೈಲ್ವೇ ನಿಲ್ದಾಣ ತಲುಪಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿ ಮೆರವಣಿಗೆಯ ಮೂಲಕ ಕರೆದೊಯ್ದು ಸನ್ಮಾನ ಮಾಡಲಿದ್ದಾರೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.