ಕುಮಟಾ: ಸೆ.12 ರಂದು ಕುಮಟಾ ಕನ್ನಡ ಸಂಘದ ಆಶ್ರಯದಲ್ಲಿ ‘ಸಂವಾದ ಹಾಗೂ ಗೌರವಾರ್ಪಣೆ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ನಿಕಟಪೂರ್ವ ಜಿ. ಪಂ.
ಸದಸ್ಯ ಶಿವಾನಂದ ಹೆಗಡೆ, ಕಡತೋಕಾ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಕೂಗಿಗೆ ಗಟ್ಟಿ ದ್ವನಿಗೂಡಿಸಿ ಜಿಲ್ಲೆಯ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಪತ್ರಕರ್ತೆ ರಾಧಾ ಹಿರೇಗೌಡರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಾಡು, ನುಡಿ, ನೆಲ, ಜಲ, ಭಾಷೆಯ ಉಳಿವಿಗಾಗಿ ಅವಿರತ ಶ್ರಮಿಸುತ್ತಿರುವ ನಮ್ಮ ಸಂಘ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ‘ಆಧುನಿಕ ಬದುಕು ಮತ್ತು ಕನ್ನಡದ ಕಡೆಗಣನೆ’ ಕುರಿತು ಚರ್ಚೆ ನಡೆಯಲಿದೆ. ಸಂವಾದದಲ್ಲಿ ನಾಡಿನ ಹಿರಿ, ಕಿರಿಯ ಪತ್ರಕರ್ತರು ಹಾಗೂ ಬುದ್ಧಿಜೀವಿಗಳು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲೆಯವರೇ ಆದ ಪತ್ರಕರ್ತೆ ರಾಧಾ ಹಿರೇಗೌಡರ್ ಅವರನ್ನು ಆತ್ಮೀಯವಾಗಿ ಗೌರವಿಸುವುದರ ಜೊತೆಯಲ್ಲಿ ಹೊನ್ನಾವರದ ಜಾನಪದ ಪ್ರಶಸ್ತಿ ಪುರಸ್ಕೃತೆ ಶಾರದಾ ಮಹಾದೇವ ಮೊಗೇರ ಇವರನ್ನು ಸನ್ಮಾನಿಸಲಾಗುವುದು.
ವಿಶೇಷ ಆಕರ್ಷಣೆಯಾಗಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಜಾನಪದ ಕಲಾವಿದ ಕಿರಣ ರಾಠೋಡ್ ಅವರಿಂದ ಅಳಿವಿನಂಚಿನಲ್ಲಿರುವ ಜಾನಪದ ನೃತ್ಯ ಆಯೋಜಿಸಲಾಗಿದೆ. ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕುಮಟಾ ಕನ್ನಡ ಸಂಘದ ಅಧ್ಯಕ್ಷರು ಕೋರಿದ್ದಾರೆ.