ಹೊನ್ನಾವರ: ಜಿಲ್ಲೆಯ ಸಾಧಕರಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರು ಮೊದಲ ಸ್ಥಾನದಲ್ಲಿದ್ದಾರೆ. ಯಕ್ಷಗಾನ ಸಾಹಿತ್ಯ, ಸಾಹಿತ್ಯ ಪರಿಷತ್ತಿನ ಬಹು ಮುಖ್ಯ ಭಾಗವಾಗಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹೊನ್ನಾವರ ಘಟಕದ ಆಶ್ರಯದಲ್ಲಿ ನಡೆದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಭಾಗವತ ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟರವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಪುರಸ್ಕೃತ ಉಮಾಮಹೇಶ್ವರ ಭಾಗವತ ದಂಪತಿಗಳನ್ನು ಸನ್ಮಾನಿಸಿ ಅಕಾಡೆಮಿ ಅಧ್ಯಕ್ಷರಾದ ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷಗಾನದ ಎಲ್ಲಾ ಅಂಗಾಂಗಗಳನ್ನು ಕರಾರುವಕ್ಕಾಗಿ ತಿಳಿದುಕೊಂಡು, ಕಲಾವಿದರಲ್ಲಿ ಅಡಗಿರುವ ಪ್ರತಿಭೆಗೆ ತಕ್ಕ ಭಾಗವತಿಕೆ ಮಾಡಿ ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಉಮೇಶ ಭಾಗವತರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇಡೀ ಪ್ರಸಂಗವನ್ನು ತಿಳಿದುಕೊಂಡು ಭಾಗವತಿಕೆ ಮಾಡುವುದು ತುಂಬಾ ಕಷ್ಟದ ಕೆಲಸ, ಅಂತಹ ಕಠಿಣ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಭಾಗವತರದ್ದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್.ನಾಯ್ಕ, ಎಚ್.ಎಮ್. ಮಾರುತಿ, ಆರ್.ಕೆ.ಮುಕ್ರಿ, ಸಂಪನ್ಮೂಲ ವ್ಯಕ್ತಿ ಈಶ್ವರ ಭಟ್, ಶಿಕ್ಷಕ ಶಶಿಧರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.